ಶನಿವಾರಸಂತೆ, ಆ. ೬: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು-ಬೆಸೂರು ಗ್ರಾಮದ ಐತಿಹಾಸಿಕ ಶ್ರೀ ಬಾಲ ತ್ರಿಪುರ ಸುಂದರಿ ಅಮ್ಮನವರ ಕ್ಷೇತ್ರದಲ್ಲಿ ಪ್ರಧಾನ ದೇವಸ್ಥಾನದ ಮುಂಭಾಗ ಧ್ವಜಸ್ಥಂಭವನ್ನು ಪ್ರತಿಷ್ಠಾಪಿಸುವ ಕಾಮಗಾರಿ ಆರಂಭವಾಯಿತು.

ದೇವಸ್ಥಾನ ಆಡಳಿತ ಮಂಡಳಿಯವರು ಸಾಂಪ್ರದಾಯಿಕ ಪೂಜೆ ವಿಧಿವಿಧಾನಗಳನ್ನು ಸಲ್ಲಿಸಿ ತೇಗದ ಮರದಿಂದ ನಿರ್ಮಿಸಿದ ಧ್ವಜಸ್ಥಂಭವನ್ನು ಕ್ರೇನ್ ಸಹಾಯದಿಂದ ನಿಲ್ಲಿಸಿ, ಕಾಮಗಾರಿಗೆ ಚಾಲನೆ ನೀಡಲಾಯಿತು.ಧ್ವಜಸ್ಥಂಭಕ್ಕೆ ತಾಮ್ರದ ತಗಡನ್ನು ಅಳವಡಿಸುವ ಕಾಮಗಾರಿ ಮಾಡಲು ತಮಿಳುನಾಡಿನ ಕಾರ್ಮಿಕರಿಗೆ ಗುತ್ತಿಗೆ ನೀಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.

ಧ್ವಜಸ್ಥಂಭ ನಿರ್ಮಾಣಕ್ಕೆ ಅಂದಾಜು ರೂ.೫ ಲಕ್ಷ ವೆಚ್ಚ ತಗಲುವುದಾಗಿ ತಿಳಿಸಿದ ಆಡಳಿತ ಮಂಡಳಿಯವರು ಭಕ್ತ ಸಮೂಹದ ಧನಸಹಾಯ ಹಾಗೂ ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ಧ್ವಜಸ್ಥಂಭ ಕಾಮಗಾರಿ ಪೂರ್ಣಗೊಂಡು ನವಂಬರ್ ತಿಂಗಳ ವಾರ್ಷಿಕೋತ್ಸವದ ದಿನ ಉದ್ಘಾಟನೆಯಾಗಲಿದೆ ಎಂದು ತಿಳಿಸಿರುತ್ತಾರೆ. ಪೂಜಾ ಕೈಂಕರ್ಯದ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಬಿ. ಮಲ್ಲಪ್ಪ, ಕಾರ್ಯದರ್ಶಿ ಬಿ.ಎಸ್. ಯದುರಾಜ್, ನಿರ್ದೇಶಕರು, ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.