ಕೂಡಿಗೆ, ಆ. ೭: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ವಿಶ್ವದ ಬುಡಕಟ್ಟು (ಆದಿವಾಸಿ) ಜನರ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾ.೯ ರಂದು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಗಿರಿಜನರ ಪುನರ್ವಸತಿ ಕೇಂದ್ರದಲ್ಲಿ ವಿಶ್ವ ಬುಡಕಟ್ಟು ಜನರ ದಿನಾಚರಣೆ ನಡೆಯಲಿದೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಸಂಸ್ಥೆ, ಕುಶಾಲನಗರ ಸ್ಥಳೀಯ ಸಂಸ್ಥೆ , ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ಹಾಗೂ ಬಸವನಹಳ್ಳಿಯಲ್ಲಿರುವ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ (ಲ್ಯಾಂಪ್ಸ್ ಸೊಸೈಟಿ) ದ ಸಹಯೋಗದೊಂದಿಗೆ ಬೆಳಿಗ್ಗೆ ೧೦ ಗಂಟೆಗೆ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ದಿನಾಚರಣೆಯನ್ನು ಶಾಸಕ ಡಾ ಮಂತರ್ ಗೌಡ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯೂ ತಿಳಿಸಿದ್ದಾರೆ.