ಮಡಿಕೇರಿ, ಆ, ೭ : ಮಡಿಕೇರಿ ರಾಜಾಸೀಟಿನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಬೇಡ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜಾಸೀಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದರಿಂದ ಜನ ಸಂಚಾರಕ್ಕೆ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅದೂ ಅಲ್ಲದೆ ರಾಜಾಸೀಟು ಬಳಿಯ ಚಾಮುಂಡೇಶ್ವರಿ ನಗರ ಅಪಾಯ ದಂಚಿನಲ್ಲಿದೆ. ಹೀಗಿರುವಾಗ ರಾಜಾಸೀಟಿನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದರೆ ಮತ್ತಷ್ಟು ಅನಾಹುತಗಳಾಗುವ ಸಾಧ್ಯತೆಯಿದೆ. ಆದ್ದರಿಂದ ರಾಜಾಸೀಟಿನಲ್ಲಿ ಗ್ಲಾಸ್ ಬ್ರಡ್ಜ್ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ ರಂಜನ್ ಮಡಿಕೇರಿ ಶಾಸಕರು ಜನರಿಗೆ ತೊಂದರೆಯಾಗದAತೆ ಗಮನ ಹರಿಸಬೇಕು. ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡುವುದಾದರೆ ಬೇರೆ ಕಡೆ ಮಾಡಲಿ ಆದರೆ ರಾಜಾಸೀಟಿನಲ್ಲಿ ನಿರ್ಮಾಣಕ್ಕೆ ಮುಂದಾದರೆ ಕಾನೂನು ಹೋರಾಟ ದೊಂದಿಗೆ ಮಡಿಕೇರಿಯ ಸಾರ್ವಜನಿಕರನ್ನು ಒಂದುಗೂಡಿಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯಿತ್ತರು.
ಜಿಲ್ಲೆಯಲ್ಲಿ ಬಾಂಗ್ಲಾ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡ ಲಾಗುತ್ತಿದೆ ಎಂದು ಆರೋಪಿಸಿದ ಅಪ್ಪಚ್ಚು ರಂಜನ್ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳ ಬೇಕೆಂದರು. ಬೆಳೆಗಾರರು ಕೂಡ ಬಾಂಗ್ಲಾ ವಲಸಿಗರ ಆಧಾರ್ ಕಾರ್ಡ್ ಪಡೆದು ಪೊಲೀಸರಿಗೆ ಮಾಹಿತಿ ನೀಡುವಂತಾಗಬೇಕು ಎಂದರು.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಕೆಲವರು ಕೀಳಾಗಿ ಮಾತನಾಡುತ್ತಿರುವುದು ಖಂಡನೀಯ; ಮಹಮ್ಮದ್ ಸಮೀರ್ ಎಂಬ ಯುವಕ ತನ್ನ ಬಳಿ ಧರ್ಮಸ್ಥಳದಲ್ಲಿ ನಡೆದ ಘಟನೆ ಬಗ್ಗೆ ದಾಖಲೆಗಳಿವೆ ಎನ್ನುತ್ತಾನೆ. ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಹೇಳಿದ ಅಪ್ಪಚ್ಚು ರಂಜನ್ ಗಿರೀಶ್ ಮಟ್ಟಣ್ಣನವರ್ ಪ್ರಚೋದಿಸು ತ್ತಿದ್ದಾರೆ ಎಂದು ಆಪಾದಿಸಿದರು.
ಮುಡಾದಲ್ಲಿ ಅಕ್ರಮ
ಮುಡಾದಲ್ಲಿ ಒಂದು ಏಕರೆ ಜಾಗ ಭೂ ಪರಿವರ್ತನೆಗೆ ರೂ. ೨೫ ಲಕ್ಷಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ದಾಖಲೆ ಸಹಿತ ಬಹಿರಂಗಪಡಿಸುವುದಾಗಿ ಮಾಜಿ ಶಾಸಕರು ಹೇಳಿದರು. ಲೋಕೋಪಯೋಗಿ ಇಲಾಖೆ ರಸ್ತೆಗಳು ಹದಗೆಟ್ಟಿವೆ, ರಸ್ತೆಗಳ ನಿರ್ವಹಣೆಗಾಗಿ ಇಲಾಖೆಗೆ ಸರ್ಕಾರ ದಿಂದ ಹಣ ಬರುತ್ತದೆ. ಆದರೆ ರಸ್ತೆಗಳ ನಿರ್ವಹಣೆ ಆಗುತ್ತಿಲ್ಲ ಎಂದು ದೂರಿದ ಅಪ್ಪಚ್ಚು ರಂಜನ್ ನಿರ್ವಹಣೆಗಾಗಿ ಬರುತ್ತಿರುವ ಹಣ ಏನಾಗುತ್ತಿದೆ ಎಂಬ ಬಗ್ಗೆ ಇಬ್ಬರು ಶಾಸಕರುಗಳು ಪರಿಶೀಲಿಸಬೇಕೆಂದು ಹೇಳಿದರು.
ಕೊಡಗಿನಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ ಆನೆ ಕಂದಕಗಳು ಸಮರ್ಪಕವಾಗಿ ನಿರ್ವಹಣೆ ಆಗದ ಕಾರಣ ಜೀವಗಳು ಬಲಿ ಆಗುತ್ತಿದ್ದು, ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅಪ್ಪಚ್ಚು ರಂಜನ್ ಸಿದ್ದರಾಮಯ್ಯ ಸರ್ಕಾರ ದುರಾಡಳಿತ ನಡೆಸುತ್ತಿದ್ದು, ಸಿದ್ದರಾಮಯ್ಯ ರಾಜಿನಾಮೆ ನೀಡಲಿ ಎಂದು ಒತ್ತಾಯಿಸಿದರು.
ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಮಾತನಾಡಿ, ಕಾಂಗ್ರೆಸ್‌ನ ಕೆಲವರು ತಮ್ಮ ಸ್ವಂತ ಲಾಭಕ್ಕಾಗಿ ರಾಜಾಸೀಟ್‌ನಲ್ಲಿ ಗ್ಲಾಸ್ ಬ್ರ‍್ರಿಡ್ಜ್ ಮಾಡಲು ಮುಂದಾಗಿದ್ದಾರೆ. ಪರಿಸರಕ್ಕೆ ಪೂರಕ ಅಭಿವೃದ್ಧಿ ಕಾರ್ಯ ನಡೆಯಲಿ ಆದರೆ ಪರಿಸರಕ್ಕೆ ಮಾರಕ ಅಭಿವೃದ್ದಿ ಕಾರ್ಯ ನಡೆಯುವುದು ಬೇಡ. ಇದರ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಯಬೇಕೆಂದರು.