ಸೋಮವಾರಪೇಟೆ, ಆ. ೮: ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಗೆ ಗೈರು, ಅಸಮರ್ಪಕ ಅನುಪಾಲನಾ ವರದಿ ಸೇರಿದಂತೆ ಅಂಗನವಾಡಿಗಳ ಸೂಕ್ತ ನಿರ್ವಹಣೆಯಲ್ಲಿ ಗಂಭೀರ ಪ್ರಯತ್ನ ಆಗುತ್ತಿಲ್ಲ ಎಂದು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿರುದ್ಧ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಇದರೊಂದಿಗೆ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಗೃಹೋಪಯೋಗಿ ಸಿಲಿಂಡರ್ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸದಂತೆ ಎಚ್ಚರಿಕೆ ವಹಿಸ ಬೇಕೆಂಬ ಚರ್ಚೆಗಳು ಸಭೆಯಲ್ಲಿ ಪ್ರಮುಖವಾಗಿ ಕೇಳಿಬಂತು.
ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯು ಅಧ್ಯಕ್ಷ ಜಿ.ಎಂ. ಕಾಂತರಾಜು ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣ ದಲ್ಲಿ ನಡೆಯಿತು. ಅನುಪಾಲನಾ ವರದಿ ಮಂಡನೆಯ ಸಂದರ್ಭ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯ ಪರವಾಗಿ ಸಿಬ್ಬಂದಿಯೋರ್ವರು ಮಾಹಿತಿ ನೀಡಲು ಮುಂದಾದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಕಾಂತರಾಜು, ಸಂಬAಧಿಸಿದ ಅಧಿಕಾರಿ ತಾಲೂಕಿನ ಅಂಗನ ವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿಲ್ಲ. ಅಲ್ಲದೆ ಸಭೆಗಳಲ್ಲಿ ನಿಡುತ್ತಿರುವ ವರದಿಗಳೂ ಸಹ ಮೇಲ್ನೋಟಕ್ಕೆ ಸಂಶಯಕ್ಕೆ ಎಡೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಚಾರ. ಅಲ್ಲದೆ ಆಹಾರ ಪೋಲಾಗುತ್ತಿದೆ ಎಂದು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಪರಮೇಶ ಕುಮಾರ್ ದನಿಗೂಡಿಸಿದರು. ಮುಂದಿನ ದಿನಗಳಲ್ಲಿ ಸಂಬAಧಿಸಿದ ಅಧಿಕಾರಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವಂತೆ ಸಭೆಯಲ್ಲಿ ಸೂಚನೆ ನೀಡಲಾಯಿತು.
ಬಡಜನರ ಅನುಕೂಲಕ್ಕಾಗಿ ಸರ್ಕಾರ ಪಡಿತರ ಅಕ್ಕಿ ವಿತರಿಸಿದರೆ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಅಧ್ಯಕ್ಷರು ತಾಲೂಕು ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಅಕ್ಕಿ ಮಾರಾಟ ಹಾಗೂ ಗೃಹಬಳಕೆ ಅಡುಗೆ ಅನಿಲವನ್ನು ಹೊಟೇಲ್, ಕ್ಯಾಂಟೀನ್, ಬೇಕರಿ ಗಳಲ್ಲಿ ವಾಣಿಜ್ಯ ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಹಾರ ಇಲಾಖೆ ಅಧಿಕಾರಿಗಳು ಆಗಾಗ್ಗೆ ತೆರಳಿ ಪರಿಶೀಲನೆ ನಡೆಸಬೇಕೆಂದು ನಿರ್ದೇಶನ ನೀಡಿದರು.
ಇದೇ ಸಂದರ್ಭ ತುರ್ತು ಆರೋಗ್ಯ ಚಿಕಿತ್ಸೆಯ ಸಲುವಾಗಿ ೪ ಮಂದಿಗೆ ಬಿ.ಪಿ.ಎಲ್. ಕಾರ್ಡ್ ವಿತರಿಸಲಾಯಿತು. ವಿವಿಧ ಇಲಾಖೆಯ ಪ್ರಗತಿಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸುಂದರ್, ತಾಲೂಕು ಸಮಿತಿಯ ಸದಸ್ಯರುಗಳಾದ ಎಸ್.ಎಂ. ಡಿಸಿಲ್ವಾ, ವಿ. ಸಂದೀಪ್, ಸಿ.ಬಿ. ಅಬ್ಬಾಸ್, ಬಿ.ಟಿ. ರಂಗಸ್ವಾಮಿ, ಹೆಚ್.ಬಿ. ರಾಜಪ್ಪ, ಡಿ.ಪಿ. ಬೋಜಪ್ಪ, ಎಸ್.ಪಿ. ರಾಜು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.