ಮಡಿಕೇರಿ, ಆ. ೯ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ತಾ. ೧೨ ರಿಂದ ೧೪ರ ವರೆಗೆ ರಾಜ್ಯಾದ್ಯಂತ ಅಹೋರಾತ್ರಿ ಪ್ರತಿಭಟನೆ ನಡೆಯಲಿದ್ದು, ಇದರ ಭಾಗವಾಗಿ ಮಡಿಕೇರಿಯಲ್ಲಿ ಮೂರು ದಿನಗಳ ಕಾಲ ಸಮಾವೇಶ ಮತ್ತು ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷೆ ಎಂ. ಉಮಾದೇವಿ ತಿಳಿಸಿದರು.

ಪತ್ತಿಕಾ ಭವನದಲ್ಲಿ ಪತ್ತಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯ ಕಾರಣದಿಂದ ಮಡಿಕೇರಿ ಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ಸಾಧ್ಯವಾಗದಿರುವುದರಿಂದ, ಜಿಲ್ಲೆಯ ಆಶಾ ಕಾರ್ಯಕರ್ತೆಯರು ನಗರದ ಬಾಲಭಾವನದಲ್ಲಿ ಕೆಲಸ ಸ್ಥಗಿತಗೊಳಿಸಿ ಸಮಾವೇಶ ನಡೆಸಲಿದ್ದಾರೆ. ತಾ. ೧೨ ರಂದು ಬಾಲಭವನದಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದರು.

ಕಳೆದ ಜನವರಿಯಲ್ಲಿ ನಡೆದ ಹೋರಾಟದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ೧೦ ಸಾವಿರ ರೂ. ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಏಳು ತಿಂಗಳು ಕಳೆದರೂ ಇದನ್ನು ಜಾರಿಗೊಳಿಸಿಲ್ಲ.

ಆಶಾ ಕಾರ್ಯಕರ್ತೆಯರಿಗೆ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಕೇಂದ್ರ ಸರ್ಕಾರದಿಂದ ನೀಡುವ ಪ್ರೋತ್ಸಾಹಧನವನ್ನು ನೇರ ಖಾತೆಗೆ ಜಮಾ ಮಾಡಬೇಕೆಂಬ ಉದ್ದೇಶದಿಂದ ಪ್ರಾರಂಭಿಸಿರುವ ಆಶಾ ಸಾಫ್ಟ್ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಕಾರ್ಯಕ್ಷಮತೆಯ ಆಧಾರದ ಮೇಲೆ ನೀಡುವ ಪ್ರೋತ್ಸಾಹಧನ ಸರಿಯಾದ ಸಮಯಕ್ಕೆ ಸೇರುತ್ತಿಲ್ಲ. ಇದರಿಂದ ಕೆಲಸ ಕಳೆದುಕೊಳ್ಳುವ ಆತಂಕವನ್ನು ಆಶಾ ಕಾರ್ಯಕರ್ತೆಯರು ಅನುಭವಿಸುತ್ತಿ ದ್ದಾರೆ ಎಂದು ಹೇಳಿದರು.

ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಹೆಚ್ಚಳ ಮಾಡಬೇಕು, ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯ ಬಾರದು, ಆಶಾ ಸುಗಮ ಕಾರರನ್ನು ಸೂಕ್ತ ವೇತನ ದೊಂದಿಗೆ ಮುಂದುವರೆಸಬೇಕು, ನಿವೃತ್ತ ಆಶಾಗಳಿಗೆ ಇಡುಗಂಟು ನೀಡಬೇಕೆಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷೆ ತೆಕ್ಕಡೆ ಪೂರ್ಣಿಮಾ ಮಾತನಾಡಿ, ಬಹುತೇಕ ಆಶಾ ಕಾರ್ಯಕರ್ತೆಯರು ಬಡವರಾಗಿದ್ದು, ಲೈನ್‌ಮನೆಗಳಲ್ಲಿ ವಾಸ ಮಾಡಿಕೊಂಡು ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಗಲು-ರಾತ್ರಿ ಎನ್ನದೇ ಯಾವುದೇ ಕುಂದು ಕೊರತೆ ಇಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಆದರೆ ದುಡಿಮೆಗೆ ತಕ್ಕ ಫಲವಿಲ್ಲ. ಹಲವು ಭಾರಿ ಪ್ರತಿಭಟನೆ ಮಾಡಿದ್ದರೂ ಕೂಡ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಎಂ. ನಾಗಮಣಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಐಮುಡಿಯಂಡ ಶಾಂತಿ ಗಣೇಶ್, ಸಮಿತಿ ಸದಸ್ಯರಾದ ಬಿ.ವಿ .ವನಿತಾ, ಎನ್. ಶ್ರೀಮತಿ ಉಪಸ್ಥಿತರಿದ್ದರು.