ಮಡಿಕೇರಿ, ಆ. ೯: ಸ್ವತಂತ್ರ ಭಾರತ ಸಂದರ್ಭ ಕೆಲವರ ಕುಹ ಕಿನಿಂದ ಹರಿದು ಹಂಚಿಹೋಗಿರುವ ಭಾರತ ದೇಶ ಮತ್ತೆ ಅಖಂಡ ಭಾರತವಾಗಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಕಾರ್ಯಕರ್ತ ನವೀನ್ ಸುಬ್ರಮಣ್ಯ ಕರೆ ನೀಡಿದರು.

ಹಿಂದೂ ಜಾಗರಣಾ ವೇದಿಕೆ ವತಿಯಿಂದ ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂಕಲ್ಪ ಯಾತ್ರೆ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಮಾಡಿದ ಅವರು; ಭಾರತೀಯ ಸ್ವಾತಂತ್ರö್ಯದ ಹೋರಾಟದ ಮಜಲುಗಳನ್ನು ಮೆಲುಕು ಹಾಕಿದರು. ಕೃಷಿ, ಜಾನಪದದ ನೆಲೆಗಟ್ಟಿನಲ್ಲಿ ನೆಲೆನಿಂತಿರುವ ಈ ಭಾರತ ದೇಶದಲ್ಲಿ ಈ ದೇಶವನ್ನು, ಈ ನೆಲವನ್ನು ಪ್ರೀತಿಸುವವರು ನೆಲೆಸಬೇಕೇ ಹೊರತು ದೇಶದ್ರೋಹಿಗಳಲ್ಲ ಎಂದು ಪ್ರತಿಪಾದಿಸಿದರು.

ಪೂರ್ವಾಗ್ರಹ ಪೀಡಿತರು ಭಾರತ ದೇಶವನ್ನು ಆರ್ ಎಸ್ ಎಸ್ ಕಟ್ಟಿದೆ ಎಂದು ಬಿಂಬಿಸುತ್ತಿದ್ದಾರೆ. ಅದರೆ ಭಾರತವನ್ನು ಜಾತಿ, ಜನಾಂಗ, ಮರೆತು ಎಲ್ಲರೂ ಸೇರಿ ಕಟ್ಟಿದ್ದಾರೆ., ಆರ್ ಎಸ್ ಎಸ್ ಅದನ್ನು ಒಪ್ಪಿಕೊಂಡಿದೆ. ಈ ನೆಲ, ನೀರು, ಅನ್ನವನ್ನು ತಾಯಿ ಭಾರತಿ ನೀಡುತ್ತಿದೆ ಎಂದು ನಂಬಿದೆ. ಗಂಗೆ, ಕಾವೇರಿಗೆ ತಾಯಿಯ ಸ್ಥಾನ ನೀಡಿರುವ ಹಾಗೇಯೇ ಭಾರತ ಮಾತೆಗೂ ತಾಯಿಯ ಸ್ಥಾನ ನೀಡಿದೆ. ಈ ತಾಯಿಯ ಸ್ಥಾನ ಉಳಿಸಿಕೊಳ್ಳಲು ಬದ್ಧವಾಗಿದೆ ಎಂದರು.

ಇತಿಹಾಸವನ್ನು ಮೆಲುಕು ಹಾಕಿದ ಅವರು; ಭಾರತ ರಾಜಕೀಯವಾಗಿ ವಿಭಜನೆಯಾಗಿದೆಯೇ ಹೊರತು ಭಾವಾನಾತ್ಮಕವಾಗಿ ಆಗಿಲ್ಲ. ಸಿಂಧೂ ನದಿಯ ಸಂಸ್ಕೃತಿಯಲ್ಲಿ ಹುಟ್ಟಿರುವ ನಮ್ಮ ಸಂಸ್ಕೃತಿಯನ್ನು ದೂರವಾಗಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಿಂಜಾವೇ ಸೇರಿದಂತೆ ಸಂಘ ಸಂಸ್ಥೆಗಳು ಕಾರ್ಯೋನ್ಮುಖವಾಗಿದ್ದು, ಅಖಂಡ ಭಾರತ ಪುನರ್ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.

ಹಿಂಜಾವೇ ಅಧ್ಯಕ್ಷ ಬೋಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಇದು ಧಾರ್ಮಿಕ ಕಾರ್ಯಕ್ರಮವಲ್ಲ, ರಾಜಕೀಯವಾಗಿ ದೇಶವನ್ನು ಹಾಳು ಮಾಡಿದವರ ಬಗ್ಗೆ ಜನತೆಗೆ ಮಾಹಿತಿ ನೀಡುವ ಕಾರ್ಯಕ್ರಮವಾಗಿದೆ. ಆದರೆ ಇಂತಹ ಕಾರ್ಯಕ್ರಮಗಳಿಗೂ ಪೊಲೀಸ್ ಇಲಾಖೆ ಅಡ್ಡಿಪಡಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮೇ. ಡಾ. ಕುಶ್ವಂತ್ ಕೋಳಿಬೈಲು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಹ ಸಂಚಾಲಕ ಸೂರಜ್ ಪೆಮ್ಮಯ್ಯ, ಮಡಿಕೇರಿ ನಗರ ಅಧ್ಯಕ್ಷ ಅಪ್ಪು ರೈ ಇದ್ದರು. ಸಂಚಾಲಕ ಸುನಿಲ್ ಮಾದಾಪುರ ನಿರ್ವಹಣೆ ಮಾಡಿದರು. ರವಿ ಭೂತನಕಾಡು ತಂಡದವರು ದೇಶಭಕ್ತಿ ಗೀತೆ ಹಾಡಿದರು.