ಗೋಣಿಕೊಪ್ಪಲು, ಆ. ೯: ಸೇವಾ ಭದ್ರತೆ ಹಾಗೂ ಹೊರಗುತ್ತಿಗೆ ಪದ್ಧತಿಯಿಂದ ಮುಕ್ತಿ ನೀಡುವಂತೆ ಒತ್ತಾಯಿಸಿ ರಾಜ್ಯ ವನ್ಯಜೀವಿ ಘಟಕಗಳ ದಿನಗೂಲಿ ಹೊರಗುತ್ತಿಗೆ ನೌಕರರು ಕೆಲಸ ಸ್ಥಗಿತಗೊಳಿಸಿ ರಾಜ್ಯವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ವೀರಾಜಪೇಟೆಯಲ್ಲಿ ಆಯೋಜನೆಗೊಂಡಿದ್ದ ರಾಜ್ಯ ವನ್ಯಜೀವಿ ಘಟಕಗಳ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘದ ಸಭೆಯಲ್ಲಿ ರಾಜ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಿನಗೂಲಿ ನೌಕರರ ಬೇಡಿಕೆಗಳು ಸರ್ಕಾರದ ಮುಂದಿದ್ದರೂ ಇಲ್ಲಿಯ ತನಕ ಸಮಸ್ಯೆಗೆ ಪರಿಹಾರ ಲಭಿಸಿಲ್ಲ. ಇದೀಗ ಅನಿವಾರ್ಯವಾಗಿ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರ ಗಮನ ಸೆಳೆಯುವ ಸಲುವಾಗಿ ಮುಂದಿನ ಅಧೀವೇಶನದ ಸಂದರ್ಭದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ ರಾಜ್ಯದ ಹಲವು ವಲಯಗಳಿಗೆ ಭೇಟಿ ನೀಡಿ ದಿನಗೂಲಿ ನೌಕರರ ಅಹವಾಲುಗಳನ್ನು ಸ್ವೀಕರಿಸಲಾಗಿದೆ ಎಂದರು.
ಏಕಕಾಲದಲ್ಲಿ ನೌಕರರು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸುವುದರಿಂದ ಸರ್ಕಾರದ ಗಮನ ಸೆಳೆಯಬಹುದಾಗಿದೆ. ಇದರಿಂದಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ. ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುವ ಅವಕಾಶವಿದೆ. ಆ ನಿಟ್ಟಿನಲ್ಲಿ ಎಲ್ಲಾ ನೌಕರರು ಸಂಘದ ತೀರ್ಮಾನಗಳಿಗೆ ಬದ್ದರಾಗಿ ಕೆಲಸ ನಿರ್ವಹಿಸುವಂತೆ ಕರೆ ನೀಡಿದರು.
ಸಭೆಯಲ್ಲಿ ಕೊಡಗು ಜಿಲ್ಲೆಯ ಶ್ರೀಮಂಗಲ, ಮಾಕುಟ್ಟ, ಭಾಗಮಂಡಲ, ನಾಗರಹೊಳೆ ಹಾಗೂ ಪುಷ್ಪಗಿರಿ ಸೇರಿದಂತೆ ವಿವಿಧ ವಲಯಗಳಿಂದ ದಿನಗೂಲಿ ನೌಕರರ ಸದಸ್ಯರು ಸಭೆಗೆ ಆಗಮಿಸಿದ್ದರು. ದಿನಗೂಲಿ ನೌಕರರು ಮುಂದಿನ ದಿನದಲ್ಲಿ ತಮ್ಮ ಸೇವಾ ಭದ್ರತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಗೌರವ ಅಧ್ಯಕ್ಷ ಎ.ಎಂ. ನಾಗರಾಜ್ ಸಭೆಗೆ ಮಾಹಿತಿ ನೀಡಿದರು. ರಾಜ್ಯ ವನ್ಯಜೀವಿ ಘಟಕಗಳ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಎಸ್. ಹರೀಶ್ ಸ್ವಾಗತಿಸಿ, ವಂದಿಸಿದರು.
ವಲಯ ಅಧ್ಯಕ್ಷರುಗಳ ನೇಮಕ
ಸಭೆಯಲ್ಲಿ ಶ್ರೀಮಂಗಲ ವಲಯ ಅಧ್ಯಕ್ಷರಾಗಿ ಸುದರ್ಶನ್, ಉಪಾಧ್ಯಕ್ಷರಾಗಿ ಬಿ. ನವೀನ, ಮಾಕುಟ್ಟ ವಲಯ ಅಧ್ಯಕ್ಷರಾಗಿ ಬಿ.ಬಿ. ಹೊನ್ನಪ್ಪ, ಉಪಾಧ್ಯಕ್ಷರಾಗಿ ವಿ. ರಂಗಚಾರಿ, ಭಾಗಮಂಡಲ ವಲಯ ಅಧ್ಯಕ್ಷರಾಗಿ ಧನಂಜಯ, ಉಪಾಧ್ಯಕ್ಷರಾಗಿ ಲಕ್ಷಿö್ಮ, ಪುಷ್ಪಗಿರಿ ವಲಯ ಅಧ್ಯಕ್ಷರಾಗಿ ಶಂಕರ್, ಉಪಾಧ್ಯಕ್ಷರಾಗಿ ಕುಶಾಲಪ್ಪ ಅವರನ್ನು ಆಯ್ಕೆ ಮಾಡಲಾಯಿತು.