*ಗೋಣಿಕೊಪ್ಪ, ಆ. ೧೨: ಅಕ್ಟೋಬರ್ ೨ ರಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕೊಡವ ಕೌಟುಂಬಿಕ ವಾಲಿಬಾಲ್ ಮತ್ತು ಥ್ರೋಬಾಲ್ ಚಿರಿಯಪಂಡ ಕಪ್ ಆಯೋಜಿಸಲಾಗಿದೆ ಎಂದು ಚಿರಿಯಪಂಡ ಸ್ಪೋರ್ಟ್ಸ್ ಕಮಿಟಿ ಉಪಾಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ತಿಳಿಸಿದ್ದಾರೆ.

ಅಕ್ಟೊಬರ್ ೫ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಕೊಡವ ಜನಾಂಗದ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಪುರುಷರ ಆರು ಜನರ ತಂಡ ವಾಲಿಬಾಲ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಥ್ರೋಬಾಲ್‌ನಲ್ಲಿ ೭ ಜನರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು. ವಾಲಿಬಾಲ್ ಆಟಕ್ಕೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ಈ ನಿಟ್ಟಿನಲ್ಲಿ ಎರಡನೇ ವರ್ಷದ ಟೂರ್ನಿಯಲ್ಲಿ ಚಿರಿಯಪಂಡ ಕುಟುಂಬ ಆಯೋಜನೆ ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯದರ್ಶಿ ಪವನ್ ಬಿದ್ದಪ್ಪ ಮಾತನಾಡಿ, ಮಹಿಳೆಯರಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡಲು ಥ್ರೋಬಾಲ್ ಟೂರ್ನಿಯನ್ನು ವಾಲಿಬಾಲ್ ಆಟದ ಸಮಯದಲ್ಲಿಯೇ ನಡೆಸಲಾಗುತ್ತಿದೆ. ಈಗಾಗಲೇ ಹಾಕಿಯಲ್ಲಿ ಸಾಕಷ್ಟು ಮಹಿಳೆಯರು ಸಾಧನೆ ತೋರಿದ್ದಾರೆ. ಕ್ರಿಕೆಟ್‌ನಲ್ಲಿ ಪ್ರತ್ಯೇಕ ಮಹಿಳಾ ಕಪ್ ನಡೆಸಲಾಗುತ್ತಿದೆ. ಇದರಿಂದಾಗಿ ಚಿರಿಯಪಂಡ ಕುಟುಂಬ ವಿಶೇಷ ಚಿಂತನೆ ನಡೆಸಿ ಮಹಿಳೆಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ನೋಂದಣಿಗೆ ೯೯೮೦೯೮೯೬೯೫, ೮೨೭೭೩೭೯೧೩೬, ೯೮೪೫೯೯೪೬೦೧ ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಚಿರಿಯಪಂಡ ಕುಟುಂಬ ಅಧ್ಯಕ್ಷ ಉಮೇಶ್ ಉತ್ತಪ್ಪ, ಉಪಾಧ್ಯಕ್ಷ ಸುಧಾ ಚೆಂಗಪ್ಪ, ಸ್ಪೋರ್ಟ್ಸ್ ಕಮಿಟಿ ಅಧ್ಯಕ್ಷ ರಾಕೇಶ್ ಪೂವಯ್ಯ, ಟೂರ್ನಿ ನಿರ್ದೇಶಕ ದೀಪಕ್ ಸುಬ್ಬಯ್ಯ ಇದ್ದರು.