ಮರಗೋಡು, ಆ. ೧೨: ಜನಾಂಗ ಬಾಂಧವರ ಮಧ್ಯೆ ಒಗ್ಗಟ್ಟು ಮೂಡಲು ಕ್ರೀಡಾಕೂಟಗಳು ಸಹಕಾರಿ ಎಂದು ಐರಿಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್ ಅಭಿಪ್ರಾಯಪಟ್ಟರು.
ಮರಗೋಡು ಗ್ರಾಮದಲ್ಲಿ ಐಮಂಡ ಕುಟುಂಬಸ್ಥರ ಗದ್ದೆಯಲ್ಲಿ ನಡೆದ ಎರಡನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಐರಿ ಮಕ್ಕಡ ಕೂಟ ಮತ್ತು ಐಮಂಡ ಪೊಮ್ಮಕ್ಕಡ ಕೂಟದ ಆಯೋಜನೆಯಲ್ಲಿ ಐಮಂಡ ರೂಪೇಶ್ ಕುಮಾರ್ ಅವರ ಗದ್ದೆಯಲ್ಲಿ ಎರಡನೇ ವರ್ಷದ ಕೆಸರು ಗದ್ದೆ ಕ್ರೀಡಾ ಕೂಟ ನಡೆಯಿತು. ಇದೇ ಸಂದರ್ಭ ಮಾತನಾಡಿದ ಸೋಮವಾರಪೇಟೆ ವಲಯದ ಎಸಿಎಫ್ ಐರೀರ ಗೋಪಾಲ್, ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸುವ ಮೂಲಕ ಇಂದಿನ ಮಕ್ಕಳಿಗೆ ಹಳ್ಳಿ ಸೊಗಡಿನ ಮನರಂಜನೆ ದೊರೆತಂತಾಗಿದೆ. ವರ್ಷಕ್ಕೊಮ್ಮೆಯಾದರೂ ಈ ರೀತಿ ಕೆಸರಿನಲ್ಲಿ ಆಡುವುದರ ಮೂಲಕ ಮಕ್ಕಳು ಮಣ್ಣಿನ ಸೊಗಡನ್ನು ಅರಿಯಬೇಕೆಂದು ಕರೆ ನೀಡಿದರು. ಕೆಸರು ಗದ್ದೆ ಕ್ರೀಡಾ ಕೂಟವನ್ನು ಐಮಂಡ ಕುಟುಂಬದ ಪಟ್ಟೆದಾರ ಐಮಂಡ ಪೊನ್ನಪ್ಪ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು.
ಬಳಿಕ ಸಾಂಪ್ರದಾಯಿಕ ನಾಟಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಹ್ಯಾಂಡ್ ಬಾಲ್, ಹಗ್ಗಜಗ್ಗಾಟ ಹಾಗೂ ವಿವಿಧ ವಯೋಮಾನದವರಿಗೆ ನೂರು ಮೀಟರ್ ಓಟದ ಸ್ಫರ್ಧೆ ಆಯೋಜಿಸಲಾಗಿತ್ತು. ಮಧ್ಯಾಹ್ನದ ಬಳಿಕ ಕಕ್ಕಡ ಮಾಸದ ವಿಶೇಷ ತಿನಿಸುಗಳನ್ನೊಳಗೊಂಡ ತೀನಿ ನಮ್ಮೆಯನ್ನೂ ಆಯೋಜಿಸಲಾಗಿತ್ತು. ಐಮಂಡ ಕುಟುಂಬದ ೯೦ಕ್ಕೂ ಅಧಿಕ ಸದಸ್ಯರು, ಐರಿ ಮಕ್ಕಡ ಕೂಟದ ಸದಸ್ಯರು ಹಾಗೂ ಆಹ್ವಾನಿತ ಅತಿಥಿಗಳು ಕೆಸರು ಗದ್ದೆಯಲ್ಲಿ ಮಿಂದೆದ್ದು ಸಂಭ್ರಮಿಸಿದರು. ಹಲವು ಸಂಕಷ್ಟಗಳ ಮಧ್ಯೆ ಇಂದಿಗೂ ಭತ್ತದ ಕೃಷಿ ಮಾಡುತ್ತಿರುವ ರೈತ ಐಮಂಡ ರೂಪೇಶ್‌ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಐರಿಸಮಾಜ ನಿರ್ದೇಶಕ ಐರೀರ ಬೋಪಯ್ಯ, ಅಮ್ಮಣಂಡ ಪೂಣಚ್ಚ, ಐಮಂಡ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಐಮಂಡ ಪುಷ್ಪಾವತಿ ಭಾಗವಹಿಸಿದ್ದರು.