ಕುಶಾಲನಗರ, ಆ. ೧೨: ಮೇಯಲು ತೆರಳಿದ ಹಸು ನೀರಾವರಿ ಇಲಾಖೆಗೆ ಸೇರಿದ ಪಂಪ್ ಹೌಸ್‌ನ ಬೃಹತ್ ಕಂದಕಕ್ಕೆ ಬಿದ್ದ ಘಟನೆ ಕುಶಾಲನಗರ ಸಮೀಪ ಮುತ್ತಿನ ಮುಳ್ಳುಸೋಗೆ ಬಳಿ ಸಂಭವಿಸಿದೆ.

ಕುಶಾಲನಗರ ಸಮೀಪದ ಮುತ್ತಿನ ಮುಳ್ಳುಸೋಗೆ ಬಳಿ ಕಾವೇರಿ ನದಿ ತಟದಲ್ಲಿ ನಿರ್ಮಾಣಗೊಂಡಿರುವ ನೀರಾವರಿ ಇಲಾಖೆಯ ಪಂಪ್‌ಹೌಸ್‌ನಲ್ಲಿ ಸುಮಾರು ೫೦ ಅಡಿಗಿಂತಲೂ ಅಧಿಕ ಆಳದ ಆರು ಬಾವಿಗಳನ್ನು ಕೊರೆಯಲಾಗಿದೆ. ಈ ಮೂಲಕ ಪಂಪ್ ಮಾಡಿ ನೀರನ್ನು ಪಿರಿಯಾಪಟ್ಟಣ ವ್ಯಾಪ್ತಿಯ ಕೆರೆಗಳಿಗೆ ಹಾಯಿಸಲಾಗುತ್ತಿದೆ.

ಹಸು ಮೇಯಲು ತೆರಳಿದ ಸಂದರ್ಭ ಕಂದಕಕ್ಕೆ ಬಿದ್ದಿದ್ದು, ಮಾಹಿತಿ ತಿಳಿದು ತಕ್ಷಣ ಆಗಮಿಸಿದ ಕುಶಾಲನಗರ ಅಗ್ನಿಶಾಮಕ ಮತ್ತು ತುರ್ತು ಸೇವೆ ವಿಭಾಗದ ಅಧಿಕಾರಿ, ಸಿಬ್ಬಂದಿಗಳು ೩ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಸುವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಕಾವೇರಿ ನದಿಯಿಂದ ನೀರು ಪಂಪ್ ಮಾಡುವ ಮೂಲಕ ಪಿರಿಯಾಪಟ್ಟಣ ತಾಲೂಕಿನ ನೂರಕ್ಕೂ ಅಧಿಕ ಕೆರೆಗಳಿಗೆ ನೀರು ಹಾಯಿಸುವ ಕಾವೇರಿ ನೀರಾವರಿ ಇಲಾಖೆಗೆ ಸೇರಿದ ಯೋಜನೆಯ ಘಟಕದಲ್ಲಿ ಈ ಘಟನೆ ಸಂಭವಿಸಿದೆ. ತಳ ಭಾಗದಲ್ಲಿ ನೀರಿನ ಸಂಗ್ರಹ ಇದ್ದ ಕಾರಣ ಹಸುವಿಗೆ ಹೆಚ್ಚಿನ ರೀತಿಯ ಮಾರಣಾಂತಿಕ ನೋವು ಗಾಯಗಳು ಉಂಟಾಗಿಲ್ಲ.

ಸಮೀಪದ ಬೆಟ್ಟದಪುರದಲ್ಲಿ ಕಾಮಗಾರಿ ನಡೆಸುತ್ತಿದ್ದ ಬೃಹತ್ ಕ್ರೇನ್ ತರಿಸಿ ಬಳಸುವ ಮೂಲಕ ಕಾರ್ಯಾಚರಣೆ ನಡೆಸಿದ ಕುಶಾಲನಗರ ಅಗ್ನಿಶಾಮಕ ತಂಡ ಮತ್ತು ಸ್ಥಳೀಯರು ಕಂದಕದ ನೀರಿನಲ್ಲಿ ಬಿದ್ದು ಆರ್ತನಾದದೊಂದಿಗೆ ಒದ್ದಾಡುತ್ತಿದ್ದ ಹಸುವನ್ನು ಮೇಲೆತ್ತಿದ್ದಾರೆ.

ಮೂರು ತಿಂಗಳ ಗರ್ಭ ಹೊಂದಿದ ಹಸು ಅಲ್ಪಸ್ವಲ್ಪ ಗಾಯಗಳೊಂದಿಗೆ ಹೊರತರಲು ಸಹಕರಿಸಿದ ಅಗ್ನಿಶಾಮಕ ಮತ್ತು ನೀರಾವರಿ ಇಲಾಖೆ ಹಾಗೂ ಸ್ಥಳೀಯರಿಗೆ ಹಸುವಿನ ಮಾಲೀಕ ಚಂದ್ರು ಕೃತಜ್ಞತೆ ಸಲ್ಲಿಸಿದ್ದಾರೆ.

ಕುಶಾಲನಗರ ಅಗ್ನಿಶಾಮಕ ಠಾಣಾಧಿಕಾರಿ ರಂಜಿತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪ್ರೇಮಾನಂದ, ಸಂದೀಪ್, ವಸಂತ್, ದಿನೇಶ್, ಶಶಿಕುಮಾರ್, ಪ್ರವೀಣ್ ಮತ್ತು ನೀರಾವರಿ ಇಲಾಖೆಯ ಅಧಿಕಾರಿಯ ಸಿಬ್ಬಂದಿಗಳು, ಸ್ಥಳೀಯರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.