ಮಡಿಕೇರಿ, ಆ. ೧೩ : ನ್ಯಾಯಾಲಯದ ಸೂಚನೆ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಮಡಿಕೇರಿಯ ಗದ್ದುಗೆಯಲ್ಲಿನ ಅನಧಿಕೃತ ನಿರ್ಮಾಣಗಳನ್ನು ಶೀಘ್ರ ತೆರವುಗೊಳಿಸುವಂತೆ ಗದ್ದುಗೆ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಗದ್ದುಗೆಯ ೧೯.೮೬ ಎಕರೆ ಜಾಗದ ಪೈಕಿ ೧.೧೮ ಎಕರೆ ಒತ್ತುವರಿಯಾಗಿದೆ. ಒತ್ತುವರಿ ತೆರವು ಕಾರ್ಯ ನಡೆಯುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ. ಪುರಾತತ್ವ ಇಲಾಖೆಗೆ ಒಳಪಟ್ಟ ಸ್ಮಾರಕಗಳಿಗೆ ಸಂಬAಧಿಸಿದ ಜಾಗವನ್ನು ಇತರರಿಗೆ ಪರಭಾರೆ ಮಾಡಲು, ನಿವೇಶನಗಳನ್ನಾಗಿ ನೀಡಲು ಅವಕಾಶವಿಲ್ಲ. ಹೀಗಿದ್ದರೂ ಗದ್ದುಗೆಗೆ ಸೇರಿದ ಜಾಗದಲ್ಲಿ ಮನೆಗಳು, ಶಾಲೆ, ಹೊಟೇಲ್, ಐಟಿಡಿಪಿ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಅನಧಿಕೃತ ಒತ್ತುವರಿಯನ್ನು ಸಕ್ರಮಗೊಳಿಸುವ ಮೇಲ್ಮನವಿಗಳನ್ನು ನ್ಯಾಯಾಲಯ ಪುರಸ್ಕರಿಸಿಲ್ಲವೆಂದು ತಿಳಿಸಿದರು.
ಸರ್ಕಾರ ಕಳೆದ ೨೦೨೪ರ ನವೆಂಬರ್ ೪ ರಂದು ಗದ್ದುಗೆಯ ಒತ್ತುವರಿ ಜಾಗದಲ್ಲಿರುವ ವಾಸದ ಮನೆಗಳು, ಶಾಲೆ, ಹೊಟೇಲ್, ವಸತಿ ನಿಲಯದ ಕಟ್ಟಡಗಳನ್ನು ೧೫ ದಿನಗಳ ಒಳಗೆ ತೆರವುಗೊಳಸುವಂತೆ ಆದೇಶಿಸಿದೆ. ಆದರೆ, ಈ ಆದೇಶ ಬಂದು ಒಂಬತ್ತು ತಿಂಗಳು ಕಳೆದರೂ ಒತ್ತುವರಿ ತೆರವು ಪ್ರಕಿಯೆ ನಡೆದಿಲ್ಲವೆಂದು ಆರೋಪಿಸಿದ ರವಿ ಕುಶಾಲಪ್ಪ ಪುರಾತತ್ವ ಇಲಾಖೆಗೆ ಒಳಪಟ್ಟ ಸ್ಮಾರಕಕ್ಕೆ ಸೇರಿದ ಜಾಗದ ಒತ್ತುವರಿಯನ್ನು ಜಿಲ್ಲಾಧಿಕಾರಿಗಳು ಶೀಘ್ರ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ರಾಜಾಸೀಟಿನಲ್ಲಿ ಗಾಜಿನ ಸೇತುವೆ ನಿರ್ಮಾಣಕ್ಕೆ ವಿರೋಧಿಸುವುದಾಗಿ ಅವರು ಹೇಳಿದರು.
ಜಿಲ್ಲಾ ವೀರಶೈವ, ಲಿಂಗಾಯಿತ ಮಹಾಸಭಾದ ಅಧ್ಯಕ್ಷರಾದ ಹೆಚ್.ವಿ. ಶಿವಪ್ಪ ಮಾತನಾಡಿ ಗದ್ದುಗೆ ಒತ್ತುವರಿ ತೆರವಿಗೆ ಸರ್ಕಾರ ಆದೇಶ ನೀಡಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮುಡಾ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ವೀರಶೈವ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಂಬಾ ಶಿವಯ್ಯ, ಖಜಾಂಚಿ ಹೆಚ್.ಪಿ. ಉದಯಕುಮಾರ್, ಜಿ.ಪಂ. ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ ಉಪಸ್ಥಿತರಿದ್ದರು.