ವೀರಾಜಪೇಟೆ, ಆ. ೧೩ : ಶ್ರಾವಣ ಮಾಸದಲ್ಲಿ ಮನೆ ಮನೆಗೆ ಮಾಚಿದೇವ ಎಂಬ ವಿನೂತನ ಕಾರ್ಯಕ್ರಮದ ಅಂಗವಾಗಿ ಕೊಡಗು ಜಿಲ್ಲೆಗೆ ಮೊದಲ ಬಾರಿಗೆ ಜಗದ್ಗುರು ಡಾ ಶ್ರೀ ಬಸವ ಮಾಚಿದೇವ ಮಹಾಸ್ವಾಮಿ ಆಗಮಿಸಿದರು.

ವೀರಾಜಪೇಟೆಯ ತೆಲುಗರ ಬೀದಿಯಲ್ಲಿರುವ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ವೀರಾಜಪೇಟೆಯ ವೀರ ಮಡಿವಾಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜುಲೈ ೨೭ ರಂದು ರಾಮನಗರದಿಂದ ಆರಂಭವಾದ ಈ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಗೆ ಸ್ವಾಮೀಜಿಯವರು ಭೇಟಿ ನೀಡಿದರು.

ವೀರ ಮಡಿವಾಳ ಜನಾಂಗದ ಮಹಿಳೆಯರು ಸ್ವಾಮಿಜಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು. ಬಳಿಕ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸ್ವಾಮಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಜನಾಂಗ ಬಾಂಧವರಿಗೆ ಆಶೀರ್ವಚನ ನೀಡಿದರು.

ಮುಂದಿನ ಪೀಳಿಗೆ ಸುರಕ್ಷತೆಯಾಗಿರಬೇಕು. ಆರ್ಥಿಕ ಮತ್ತು ಶೈಕ್ಷಣಿಕವಾಗಿರಬೇಕು, ದುಶ್ಚÀ್ಚಟ ಮುಕ್ತ ಜನಾಂಗವಾಗಬೇಕು, ನಮ್ಮ ಕುಟುಂಬವನ್ನು

(ಮೊದಲ ಪುಟದಿಂದ) ನಾವು ಕಾಪಾಡಿಕೊಳ್ಳುವ ಉದ್ದೇಶ ಹೊಂದಬೇಕು ಎನ್ನುವುದನ್ನು ತಿಳಿಸಿದರು.

ರಾಜ್ಯ ಸರಕಾರದ ಮಾಚಿದೇವ ಅಭಿವೃದ್ಧಿ ಇಲಾಖೆ ಮತ್ತು ಕೇಂದ್ರ ಸರಕಾರದ ವಿಶ್ವ ಕರ್ಮ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು.

ನಮ್ಮ ಈ ಕಾರ್ಯಕ್ರಮ ರಾಜ್ಯದ ೩೧ ಜಿಲ್ಲೆಯಲ್ಲೂ ನಡೆಯುತ್ತದೆ, ಪ್ರತಿ ವರ್ಷವೂ ಜನವರಿ ೫ ಮತ್ತು ೬ ರಂದು ಚಿತ್ರದುರ್ಗದ ನಮ್ಮ ಮಠದಲ್ಲಿ ಕಾಯಕ ಜನೋತ್ಸವ ಕಾರ್ಯಕ್ರಮ ನಡೆಯುತ್ತದೆ, ಜನಾಂಗದ ಎಲ್ಲಾ ಸದಸ್ಯರು ಆಗಮಿಸುವಂತೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವೀರಾಜಪೇಟೆ ತಾಲೂಕು ವೀರ ಮಡಿವಾಳ ಸಂಘದ ಅಧ್ಯಕ್ಷ ರಾಜೇಶ್ ಪದ್ಮನಾಭ, ನಮ್ಮ ಜನಾಂಗದಲ್ಲೂ ಕೂಡ ಮಠವಿದೆ. ಮಠಾಧ್ಯಕ್ಷ ಯಾರು, ಎಲ್ಲಿ ಇದೆ ಎನ್ನುವ ವಿಚಾರವೇ ನಮ್ಮ ಜನಾಂಗದ ಸದಸ್ಯರಿಗೆ ಮಾಹಿತಿ ಇರಲಿಲ್ಲ, ಅಲ್ಲದೆ ನಮ್ಮ ಜನಾಂಗದ ಸದಸ್ಯರಿಗೆ ಒಂದು ಸಮುದಾಯ ಭವನದ ಅವಶ್ಯಕತೆ ಇದೆ. ಇದರ ಬಗ್ಗೆ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಗಮನಕ್ಕೆ ತರಲಾಗಿದೆ. ಜಾಗವನ್ನು ಸ್ವಂತವಾಗಿ ಖರೀದಿಸಿದರೆ ಕಟ್ಟಡ ನಿರ್ಮಾಣ ಮಾಡಲು ಸರಕಾರದ ವತಿಯಿಂದ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಕೆ. ರವಿಕುಮಾರ್, ಸಂಘದ ಕಾರ್ಯದರ್ಶಿ ಮಹದೇವ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.