ಮಡಿಕೇರಿ, ಆ. ೧೩: ಇನ್ನೇನು ಗೌರಿ ಗಣೇಶೋತ್ಸವ ಆಚರಣೆಗೆ ೧೩ ದಿನ ಮಾತ್ರ ಬಾಕಿ ಉಳಿದಿದೆ. ತಾ. ೨೭ರಂದು ಗೌರಿ ಗಣೇಶೋತ್ಸವ ಆಚರಣೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನಾಡು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲೂ ಕೂಡ ಆದಿಪೂಜಿತನ ಆರಾಧನೆಗೆ ಉತ್ಸವ ಸಮಿತಿಗಳು ಭರದ ಸಿದ್ಧತೆ ಕೈಗೊಂಡಿವೆ. ಗಣೇಶೋತ್ಸವವನ್ನು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಅಚ್ಚುಕಟ್ಟಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯಿಂದ ಉತ್ಸವ ಸಮಿತಿಗಳ ಸಭೆ ಕರೆದು ಈಗಾಗಲೇ ಸಲಹೆ ಸೂಚನೆಗಳನ್ನು ನೀಡಲಾಗಿದೆ.

ಇದರೊಂದಿಗೆ ಸ್ಥಳೀಯ ಸಂಸ್ಥೆ, ವಿದ್ಯುತ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಯಿಂದಲೂ ಉತ್ಸವ ಸಮಿತಿಗಳು ಅನುಮತಿ ಪಡೆಯಬೇಕಾಗಿದೆ. ಉತ್ಸವ ಸಮಿತಿಗಳು ಈಗಾಗಲೇ ಚಂದ ಸಂಗ್ರಹಾತಿಗೂ ಮುಂದಾಗಿವೆಯಾದರೂ ಬಲವಂತದಿAದ ವಸೂಲಾತಿ ಮಾಡುವಂತಿಲ್ಲ ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಈ ನಡುವೆ ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ನಿರ್ದಿಷ್ಠ ಶಬ್ದ ಮಿತಿಯೊಳಗೆ ಧ್ವನಿವರ್ಧಕವನ್ನು ಬಳಸಬೇಕು ಎಂದು ಪೊಲೀಸ್ ಇಲಾಖೆ ನಿರ್ದೇಶನ ನೀಡಿದ್ದು ಅಬ್ಬರದ ಡಿಜೆ ಬಳಕೆಗೆ ಅವಕಾಶವಿಲ್ಲ ಎಂದು ಉತ್ಸವ ಸಮಿತಿಗಳಿಗೆ ಸೂಚನೆ ನೀಡಿದೆ.

ಇವುಗಳೊಂದಿಗೆ ಇನ್ನೂ ಹಲವು ನಿಯಮಗಳನ್ನು ಉತ್ಸವ ಆಚರಣೆಗೆ ವಿಧಿಸಲಾಗಿದ್ದು ಅವುಗಳನ್ನು ಉತ್ಸವ ಸಮಿತಿಗಳು ಪಾಲಿಸಬೇಕಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಈ ಬಾರಿ ನಗರ ವ್ಯಾಪ್ತಿಯಲ್ಲಿ ಸುಮಾರು ೩೭ ಕಡೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ. ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯಲ್ಲಿ ೮೦ ಕಡೆಗಳಲ್ಲಿ ಗಣಪತಿ ಆರಾಧನೆ ನೆರವೇರಲಿದೆ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ವಿರಾಜಪೇಟೆ ಗಣೇಶೋತ್ಸವದಲ್ಲಿ ಈ ಬಾರಿ ವೀರಾಜಪೇಟೆ ನಗರದ ೨೨ ಕಡೆಗಳಲ್ಲಿ, ವೀರಾಜಪೇಟೆ ಗ್ರಾಮಾಂತರ ಭಾಗದ ೨೮ ಸ್ಥಳಗಳಲ್ಲಿ ಗೌರಿ ಗಣೇಶ ಆಚರಣೆ ನಡೆಯಲಿದೆ.

ಕುಶಾಲನಗರ ಪಟ್ಟಣದ ೩೨ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಯಲಿದ್ದು, ಕುಶಾಲನಗರ ಗ್ರಾಮಾಂತರ ವ್ಯಾಪ್ತಿಯ ೭೦ ಕಡೆಗಳಲ್ಲಿ ಗಣೇಶ ಉತ್ಸವ ನಡೆಯಲಿದೆ.

(ಮೊದಲ ಪುಟದಿಂದ) ಪೊನ್ನಂಪೇಟೆಯಲ್ಲಿ ೯ ಉತ್ಸವ ಸಮಿತಿಗಳು ಗಣಪತಿ ಪ್ರತಿಷ್ಠಾಪನೆ ಮಾಡಲಿವೆ. ಸೋಮವಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ೮೦ ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ನಡೆಯಲಿದೆ. ಇನ್ನುಳಿದಂತೆ ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಗ್ರಾಮಗಳಲ್ಲೂ ಗಣಪನ ಆರಾಧನೆ ಮಾಡಲು ತಯಾರಿ ನಡೆದಿದೆ. ಗಣಪತಿ ಉತ್ಸವ ಆಚರಣೆ ಸಂದರ್ಭ ಯಾವುದೇ ರೀತಿಯ ಅನಾಹುತಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಗಣಪತಿ ಪ್ರತಿಷ್ಠಾಪನೆಯ ಸ್ಥಳ, ಮೆರವಣಿಗೆ ದಿನ, ಸಮಯ, ಪೆಂಡಾಲ್‌ನಲ್ಲಿ ಉಳಿಯುವರು ಹಾಗೂ ಮೆರವಣಿಗೆಯಲ್ಲಿ ಯಾರೆಲ್ಲ ಸ್ವಯಂ ಸೇವಕರು ಎಂಬಿತ್ಯಾದಿ ಮಾಹಿತಿಗಳನ್ನು ಆಯಾ ಸಮಿತಿಗಳಿಂದ ಕಲೆ ಹಾಕುವುದರೊಂದಿಗೆ ವ್ಯವಸ್ಥಿತ ಆಚರಣೆಗೆ ಕ್ರಮ ಕೈಗೊಂಡಿದೆ.

ಪರಿಸರ ಸ್ನೇಹಿಯಾಗಿ ಆಚರಿಸಿ

ಪ್ಲಾಸ್ಟರ್ ಆಫ್ ಪ್ಯಾರಿಸ್ ಬಣ್ಣಲೇಪಿತ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದನ್ನು ಹಾಗೂ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಬಣ್ಣರಹಿತ ಅಥವಾ ನೈಸರ್ಗಿಕ ಮೂರ್ತಿಗಳೊಂದಿಗೆ ಗಣೇಶೋತ್ಸವವನ್ನು ಪರಿಸg ಸ್ನೇಹಿಯಾಗಿ ಆಚರಿಸುವಂತಾಗಲಿ ಎಂದು ಜಿಲ್ಲಾಧಿಕಾರಿ ವೆಂಕಟರಾಜಾ ತಿಳಿಸಿದ್ದಾರೆ.

ನಿಯಮ ಪಾಲಿಸಿ

ಗೌರಿ ಗಣೇಶೋತ್ಸವ ಆಚರಣೆ ಸಂಬAಧ ಇರುವ ನಿಯಮಗಳನ್ನು ಉತ್ಸವ ಸಮಿತಿಗಳು ಪಾಲಿಸಬೇಕು. ಡಿಜೆ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹೇಳಿದ್ದಾರೆ.