ಕೂಡಿಗೆ, ಆ. ೧೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ತೋಟಗಾರಿಕಾ ಕೃಷಿ ಕ್ಷೇತ್ರದ ಸಭಾಂಗಣದಲ್ಲಿ ತೋಟಗಾರಿಕಾ ಪಿತಾಮಹ ಡಾ.ಎಂ.ಹೆಚ್. ಮರಿಗೌಡ ಅವರ ಜನ್ಮ ದಿನವನ್ನು ಆಚರಿಸಲಾಯಿತು.
ಹಾರಂಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ಮಾತಾನಾಡಿ, ಭಾರತ ದೇಶದ ತೋಟಗಾರಿಕಾ ಪಿತಾಮಹ ಡಾ. ಎಂ.ಹೆಚ್. ಮರಿಗೌಡ ಅವರು ಕರ್ನಾಟಕ ರಾಜ್ಯದಲ್ಲಿ ೧೯೬೩ರಲ್ಲಿ ಕೃಷಿ ಇಲಾಖೆಯಿಂದ ತೋಟಗಾರಿಕಾ ವಿಭಾಗವನ್ನು ಪ್ರತ್ಯೇಕಗೊಳಿಸಿ, ತೋಟಗಾರಿಕೆ ಇಲಾಖೆಯಲ್ಲಿ ೧೦ ವರ್ಷಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಂತರ ದೇಶೀಯ ಮತ್ತು ವಿದೇಶೀಯ ತೋಟಗಾರಿಕಾ ಬೆಳೆಯನ್ನು ಬೆಳೆಯಲು ಇಲಾಖೆಗೆ ಮತ್ತು ರೈತರಿಗೆ ಉತ್ತೇಜನ ನೀಡುವ ಮೂಲಕ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಕಾರಣಕರ್ತರಾದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ಸಹಾಯಕಿ ಚಂದ್ರಕಲಾ, ಗುಮಾಸ್ತೆ ಲೇಖಾ, ಸೇರಿದಂತೆ ನೂರಾರು ರೈತರು ಹಾಜರಿದ್ದರು. ಇದೇ ಸಂದರ್ಭ ಮೆಣಸು ಬಳ್ಳಿಗಳ ಕಡ್ಡಿಗಳನ್ನು ರೈತರಿಗೆ ವಿತರಣೆ ಮಾಡಲಾಯಿತು.