ಸೋಮವಾರಪೇಟೆ, ಆ. ೧೪: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಭಾಗ್ಯಮ್ಮ ಅವರು ವರ್ಗಾವಣೆಗೊಂಡಿದ್ದು, ಇವರ ಸ್ಥಾನಕ್ಕೆ ಸುಳ್ಯ ತಾಲೂಕಿನಲ್ಲಿ ಬಿಇಓ ಆಗಿದ್ದ ಎಂ.ಕೃಷ್ಣಪ್ಪ ಅವರು ನೇಮಕಗೊಂಡಿದ್ದಾರೆ.

ಇಲ್ಲಿನ ಬಿಇಓ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಬಿಇಓ ಎಂ.ಕೃಷ್ಣಪ್ಪ, ತಾಲೂಕಿನಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಶಾಲೆಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುವುದು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ವಿಶೇಷ ಗಮನಹರಿಸಲಾಗುವುದು ಎಂದರು. ಈ ಸಂದರ್ಭ ಮಾತನಾಡಿದ ನಿರ್ಗಮಿತ ಬಿಇಓ ಭಾಗ್ಯಮ್ಮ, ಸೋಮವಾರಪೇಟೆ ತಾಲೂಕಿನಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದ್ದು, ಇದು ತಮಗೆ ತೃಪ್ತಿ ತಂದಿದೆ ಎಂದರು. ತಮ್ಮ ಸೇವಾವಧಿಯಲ್ಲಿ ಉತ್ತಮ ಶೈಕ್ಷಣಿಕ ಕಾರ್ಯಕ್ಕೆ ಸಹಕರಿಸಿದ ಶಿಕ್ಷಕರು ಹಾಗೂ ಕಚೇರಿಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ. ಸೋಮಶೇಖರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಿ.ಕೆ. ಮಲ್ಲಪ್ಪ, ನಿವೃತ್ತ ಉಪನ್ಯಾಸಕಿ ಎಂ.ಬಿ. ತಿಲೋತ್ತಮೆ ಸೇರಿದಂತೆ ಶಿಕ್ಷಕರ ಸಂಘಟನೆಯ ಪ್ರಮುಖರು, ನಿವೃತ್ತ ಶಿಕ್ಷಕರು, ಕಚೇರಿಯ ನೌಕರ ವರ್ಗದವರು ಹಾಜರಿದ್ದರು. ಇದೇ ವೇಳೆ ನಿರ್ಗಮಿತ ಬಿಇಓ ಭಾಗ್ಯಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.