ನಾಪೋಕ್ಲು, ಆ. ೧೭: ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭೆಗಳು ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರೋತ್ಸಾಹದ ಅಗತ್ಯತೆ ಇದ್ದು, ಈ ನಿಟ್ಟಿನಲ್ಲಿ ಸಂಘ-ಸAಸ್ಥೆಗಳ ಮೇಲೆ ಮಹತ್ತರ ಜವಾಬ್ದಾರಿಯಿದೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಇಲ್ಲಿನ ಹಿಂದೂ ಮಲಯಾಳಿ ಸಂಘದ ವತಿಯಿಂದ ಹಿಂದೂ ಬಾಂಧವರಿಗಾಗಿ ಸಮೀಪದ ಹಳೆ ತಾಲೂಕಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯ ತವರೂರು ಆಗಿರುವ ಕೊಡಗಿನಲ್ಲಿ ಕ್ರೀಡಾ ಪ್ರತಿಭಾನ್ವಿತರಿಗೆ ಕೊರತೆಯಿಲ್ಲ. ಅವರಿಗೆ ಪ್ರೋತ್ಸಾಹದ ಅಗತ್ಯ ಹೆಚ್ಚಿದೆ. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಕ್ರೀಡೆಗಿದ್ದು, ಕ್ರೀಡಾಪಟುಗಳಿಗೆ ವೇದಿಕೆ ಒದಗಿಸುವ ಮಹತ್ತರ ಜವಾಬ್ದಾರಿ ಸಂಘ-ಸAಸ್ಥೆಗಳ ಮೇಲಿದೆ. ಗ್ರಾಮೀಣ ನಿವಾಸಿಗಳು ಶತಮಾನಗಳಿಂದ ಹಗ್ಗಜಗ್ಗಾಟದಂತಹ ಹಲವು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ. ಇಂತಹ ಕ್ರೀಡೆಗಳು ಗ್ರಾಮೀಣ ಸೊಬಗನ್ನು ಎತ್ತಿ ಹಿಡಿಯುವುದರೊಂದಿಗೆ ಜನರಲ್ಲಿ ಒಗ್ಗಟ್ಟು ಮೂಡಿಸಿ ಸಾಮರಸ್ಯ ಮೂಡಿಸಲು ಸಹಕಾರಿಯಾಗಿದೆ. ಬಹುತೇಕ ಕೃಷಿಕರಾಗಿರುವ ಗ್ರಾಮೀಣ ಜನತೆಗೆ ಇಂತಹ ಕ್ರೀಡಾಕೂಟಗಳು ಮನೋರಂಜನೆ ಹಾಗೂ ಮನೋಸ್ಥೈರ್ಯವನ್ನು ಹೆಚ್ಚಿಸಲು ಪೂರಕ ಎಂದರು.

ಮಲಯಾಳ ಸಮುದಾಯದ ಕಾರ್ಯಕ್ಷಮತೆ, ಬದ್ಧತೆ ಸಮಾಜಕ್ಕೆ ಮಾದರಿಯಾಗಿದೆ. ಕೊಡಗಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಹಿಂದೂ ಮಲಯಾಳಿಗಳ ಕೊಡುಗೆ ಗಣನೀಯವಾಗಿದೆ ಎಂದರು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಎ.ಕೆ ಮಾತನಾಡಿ, ಇಲ್ಲಿನ ಹಿಂದೂ ಮಲಯಾಳಿ ಸಂಘದ ಅಭಿವೃದ್ಧಿಗೆ ನಿವೇಶನ ನೀಡುವಂತೆ ಕೋರಿದ ಅವರು, ಸಂಘಕ್ಕೆ ರೂ.೫೦ ಸಾವಿರ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

ಪಂಚಾಯಿತಿ ಸದಸ್ಯ ಅರುಣ್ ಬೇಬ ಮಾತನಾಡಿ, ಆಧುನಿಕ ಭರಾಟೆಯಲ್ಲಿ ತಂತ್ರಜ್ಞಾನ ಯುಗದಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಕ್ರೀಡಾಕೂಟಗಳು ಎಲ್ಲರನ್ನು ಒಗ್ಗೂಡಿಸುತ್ತಿವೆ ಎಂದರು.

ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಕೆ. ಅನಿಲ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷ ಎ.ಕೆ. ಚಂದ್ರ, ಕಾಫಿ ಬೆಳೆಗಾರರಾದ ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ದಾನಿಗಳಾದ ಚೀಯಕಪೂವಂಡ ಎಸ್. ಮಂಜುನಾಥ್ (ಕಟ್ಟಿ), ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಾಚೇಟಿರ ಕುಸು ಕುಶಾಲಪ್ಪ, ಹೇಮಾ ಅರುಣ್ , ಪ್ರತೀಪ ಬಿ.ಎಂ., ಕಲಿಯಂಡ ಸಂಪನ್ ಅಯ್ಯಪ್ಪ , ಹಿಂದೂ ಮಲಯಾಳಿ ಸಂಘದ ಸಲಹೆಗಾರ ರಘು ಅಜಿಮುಟ್ಟ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ದೇವಸ್ಮಿತ ಪ್ರಾರ್ಥಿಸಿ, ರವಿ ಓಂಕಾರ್, ಶೈಲಾ ನಿರೂಪಿಸಿ, ಅನಿಲ್ ವಂದಿಸಿದರು.