ಮಡಿಕೇರಿ, ಆ. ೧೯: ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಬಸ್ ಚಕ್ರ ಹರಿದು ಜಿಲ್ಲೆಯ ಮೂಲದ ವ್ಯಕ್ತಿ ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಕುಶಾಲನಗರದ ಗೌಡ ಸಮಾಜ ಬಳಿ ನಿವಾಸಿ ಮಾಜಿ ಸೈನಿಕ ಬಾಲಕೃಷ್ಣ ಹಾಗೂ ನಾಗವೇಣಿ ದಂಪತಿ ಪುತ್ರ ಪ್ರಸ್ತುತ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ರೋಶನ್ (೩೮) ಮೃತ ದುರ್ದೈವಿ.
ಪತ್ನಿ ಹಾಗೂ ಮಗುವಿನೊಂದಿಗೆ ಸಂಜಯ್ ನಗರದ ಆಶೀರ್ವಾದ್ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ ರೋಶನ್ ಅವರು ತನ್ನ ಒಂದೂವರೆ ವರ್ಷದ ಮಗುವಿಗೆ ಮಂಗಳವಾರ ಬೆಳಿಗ್ಗೆ ತಿಂಡಿ ತರಲೆಂದು ಡಿಯೋ ಸ್ಕೂಟರ್ನಲ್ಲಿ (ಕೆಎ-೦೧-ಇಎಲ್-೧೪೦೨) ತೆರಳಿದ್ದ ಸಂದರ್ಭ ಸುಮಾರು ೧೦ ಗಂಟೆಗೆ ವೈಭವ್ ಚಿತ್ರಮಂದಿರ ಬಳಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಘಟಕ ೮ಕ್ಕೆ ಸೇರಿದ ಬಸ್ಗೆ (ಕೆಎ-೫೭-ಎಫ್-೬೪೬೮) ಡಿಕ್ಕಿಯಾಗಿದೆ.
ಹೆಬ್ಬಾಳದಿಂದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆಗೆ ತೆರಳುತ್ತಿದ್ದ ಬಸನ್ನು ಹಿಂದಿಕ್ಕುವಾಗ ನಿಯಂತ್ರಣ ತಪ್ಪಿ ಬಿದ್ದು ಬಸ್ ಚಕ್ರ ಹರಿದು ದುರ್ಘಟನೆ ಸಂಭವಿಸಿರುವುದು ಸಿಸಿ ಕ್ಯಾಮರ ದೃಶ್ಯಾವಳಿಯಿಂದ ಸ್ಪಷ್ಟವಾಗಿದೆ ಎಂದು ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ರವಾನಿಸಿ ಕ್ರಮಕೈಗೊಂಡಿದ್ದು, ಸಂಜಯ್ ನಗರ ಸಂಚಾರ ಠಾಣೆಯಲ್ಲಿ ಬಸ್ ಚಾಲಕ ಕಲ್ಲಪ್ಪ ಮುಚುಡಿ ವಿರುದ್ಧ ಪ್ರಕರಣ ದಾಖಲಾಗಿದೆ.