ಶನಿವಾರಸಂತೆ, ಆ. ೨೧: ಬೆಟ್ಟದ ಮೇಲಿನಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಸಮೀಪದ ಮಾಲಂಬಿ ಜೇನುಕಲ್ಲು ಬೆಟ್ಟದ ಬದಿ ನಡೆದಿದೆ. ಮಾಲಂಬಿ ಗ್ರಾಮದ ಅಯ್ಯಪ್ಪ (೫೩) ಮೃತ ವ್ಯಕ್ತಿ. ತಾ.೧೫ ರಂದು ಜೇನುಕಲ್ಲು ಬೆಟ್ಟಕ್ಕೆ ಕಳಲೆ ತರಲೆಂದು ಹೋಗಿದ್ದ ಸಂದರ್ಭ ಬೆಟ್ಟದ ಮೇಲಿಂದ ಕಾಲು ಜಾರಿ ಕೆಳಕ್ಕುರುಳಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಳಲೆ ತರಲು ಬೆಟ್ಟಕ್ಕೆ ತೆರಳಿದ್ದ ಅಯ್ಯಪ್ಪ ಸಂಜೆಯಾದರೂ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಅಯ್ಯಪ್ಪ ಕುಟುಂಬದವರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಮರುದಿನ ಅಯ್ಯಪ್ಪ ಪತ್ನಿ ಸರೋಜಾ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ತಾ.೧೯ ರಂದು ಗ್ರಾಮಸ್ಥರು ಕಾಡಿನತ್ತ ಹೋಗಿದ್ದಾಗ ಬೆಟ್ಟದ ಬದಿಯಲ್ಲಿ ಕೊಳೆತಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಘಟನೆಯ ಸ್ಥಳಕ್ಕೆ ಶನಿವಾರಸಂತೆ ಪೊಲೀಸ್ ಠಾಣೆಯ ಪಿಎಸ್‌ಐ ಎಚ್.ವೈ. ಚಂದ್ರ ಹಾಗೂ ಹೆಡ್‌ಕಾನ್ಸ್ಟೇಬಲ್ ಪ್ರದೀಪ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.