ವೀರಾಜಪೇಟೆ, ಆ. ೨೨: ಹಲ್ಲೆ ಮಾಡಿದ ಆರೋಪಿಗಳಿಗೆ ವೀರಾಜಪೇಟೆ ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ವೀರಾಜಪೇಟೆ ನಗರದ ಚಿಕ್ಕಪೇಟೆ ನಿವಾಸಿ ಸುರೇಶ್ (೫೬) ಮತ್ತು ಕಾರ್ಯಪ್ಪ (೫೭) ಶಿಕ್ಷೆಗೊಳಗಾದವರು.

ತಾ. ೨೦.೫.೨೦೧೬ ರಂದು ವೀರಾಜಪೇಟೆಯ ಗೋಣಿಕೊಪ್ಪ ರಸ್ತೆ ಬಳಿಯಲ್ಲಿ ಆರೋಪಿಗಳು ವಾಹನ ನಿಲ್ಲಿಸಿದ್ದರು. ಈ ವೇಳೆ ಎನ್.ಡಿ ಅನಿಲ್ ಕುಮಾರ್ ಮತ್ತು ರಾಜೇಶ್ ಅವರುಗಳು ವಾಹನದಲ್ಲಿ ಬಂದಿದ್ದು, ನಿಲ್ಲಿಸಿರುವ ವಾಹನವನ್ನು ತೆರವುಗೊಳಿಸುವಂತೆ ಕೇಳಿದ್ದಾರೆ. ಈ ವೇಳೆ ಸುರೇಶ್ ಹಾಗೂ ಕಾರ್ಯಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಮತ್ತು ದೊಣ್ಣೆಯಿಂದ ಅನಿಲ್ ಕುಮಾರ್ ಮತ್ತು ರಾಜೇಶ್ ಅವರ ಮೇಲೆ ಹಲ್ಲೆ ಮಾಡಿದ್ದು, ಪರಿಣಾಮ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿ ನಂತರ ವೀರಾಜಪೇಟೆ ಠಾಣೆಯಲ್ಲಿ ಈ ಸಂಬAಧ ಪ್ರಕರಣ ದಾಖಲಾಗಿತ್ತು.

ಆರೋಪ ಸಾಬೀತಾದ ಹಿನ್ನಲೆಯಲ್ಲಿ ತಾ. ೮.೭.೨೦೧೯ ರಲ್ಲಿ ಆರೋಪಿಗಳಿಗೆ ಎರಡು ವರ್ಷ ಜೈಲು ಮತ್ತು ೧೪ ಸಾವಿರ ದಂಡ ವಿಧಿಸಿ ತೀರ್ಪು ನೀಡಲಾಗಿತ್ತು. ತೀರ್ಪು ಪ್ರಶ್ನಿಸಿ ಆರೋಪಿಗಳು ೨ ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲಿಸಿದ್ದರು. ವಿಚಾರಣೆ ನಡೆಸಿದ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ನಟರಾಜ್ ಅವರು ಈ ಹಿಂದೆ ನೀಡಿದ್ದ ತೀರ್ಪುನ್ನು ಎತ್ತಿಹಿಡಿದು ಆರೋಪಿಗಳ ಮೇಲ್ಮನವಿ ವಜಗೊಳಿಸಿ ಎರಡು ವರ್ಷ ಜೈಲು ಶಿಕ್ಷೆ ಮತ್ತು ರೂ. ೧೪ ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. ಸಂತ್ರಸ್ತರ ಪರವಾಗಿ ಸರ್ಕಾರಿ ಅಭಿಯೋಜಕ ಯಾಸಿನ್ ಅಹಮ್ಮದ್ ವಾದ ಮಂಡಿಸಿದರು.