*ಗೋಣಿಕೊಪ್ಪ, ಆ. ೨೨: ಜನಸುರಕ್ಷಾ ಅಭಿಯಾನವನ್ನು ಪೊನ್ನಪ್ಪಸಂತೆ ಗ್ರಾಮದಲ್ಲಿ ವಿವಿಧ ಬ್ಯಾಂಕ್‌ಗಳ ಸಹಯೋಗದಲ್ಲಿ ನಡೆಯಿತು. ಕೋಣನಕಟ್ಟೆ, ಬಾಳೆಲೆ ಬ್ಯಾಂಕ್ ಆಫ್ ಬರೋಡಾ ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ವ್ಯವಸ್ಥಾಪಕರುಗಳಾದ ಗೀತ, ಅನಿಲ್‌ಕುಮಾರ್ ಚಾಲನೆ ನೀಡಿದರು. ಈ ಸಂದರ್ಭ ಜನರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಮುಖ್ಯವಾಗಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆಯು ಒಂದು ಅಪಘಾತ ವಿಮೆಯಾಗಿದ್ದು, ವಾರ್ಷಿಕ ೨೦ ರೂಪಾಯಿಗಳನ್ನು ಪಾವತಿಸಿ ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ ೨ ಲಕ್ಷ ರೂಪಯಿಗಳವರೆಗಿನ ವಿಮಾ ಮೊತ್ತವು ಗ್ರಾಹಕರ ನಾಮಿನಿಗೆ ಸಿಗುವುದಾಗಿ ಮಾಹಿತಿ ನೀಡಿದರು. ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆ, ಅಟಲ್ ಪಿಂಚಣಿ ಯೋಜನೆ, ಮಾಡಿಸುವಂತೆ ಸಲಹೆ ನೀಡಿದರು. ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶಾಲಪ್ಪ ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ಸದಸ್ಯ ವಿನು ಚಂಗಪ್ಪ ಸೇರಿದಂತೆ ಹಲವರು ಇದ್ದರು.