ಸೋಮವಾರಪೇಟೆ, ಆ. ೨೨: ನಾಡು ಕಂಡ ಅಪರೂಪದ ಮುಖ್ಯಮಂತ್ರಿ ದೇವರಾಜ ಅರಸು ಅವರು ಭೂ ಸುಧಾರಣೆಗೆ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದವರು. ಇದು ಸಮಾಜದಲ್ಲಿ ಮಹಾನ್ ಕ್ರಾಂತಿಗೆ ನಾಂದಿಯಾಯಿತು ಎಂದು ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಬಣ್ಣಿಸಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರ ೧೧೦ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಳು ಹಸನಾಗಲು ಅರಸು ಅವರು ಮುಖ್ಯ ಕಾರಣಕರ್ತರು. ಬಡವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ಬಿಸಿಎಂ ಹಾಸ್ಟೆಲ್‌ಗಳನ್ನು ತೆರೆದು ಶೈಕ್ಷಣಿಕ ಸವಲತ್ತು ನೀಡಿದರು. ಅರಸು ಅವರ ಯೋಜನೆಗಳು ಇಂದಿಗೂ ಪ್ರಸ್ತುತವಾಗಿದೆ. ಮಹನೀಯರ ವಿಚಾರಗಳನ್ನು ಯುವ ಜನಾಂಗ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.

ಚಿಕ್ಕಅಳುವಾರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಜಮೀರ್ ಅಹಮ್ಮದ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿ, ಸಾಮಾಜಿಕ ಪರಿವರ್ತಕ ದೇವರಾಜ್ ಅರಸು ಅವರು ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದರು. ಹಿಂದುಳಿದ ವರ್ಗಗಳಲ್ಲಿ ನಾಯಕರನ್ನು ಹುಟ್ಟು ಹಾಕುವ ‘ಕಿಂಗ್ ಮೇಕರ್’ ಆಗಿದ್ದರು ಎಂದರು.

ಯುವ ಜನತೆಯ ಮೇಲೆ ಅಪಾರ ಗೌರವ, ಪ್ರೀತಿ, ನಂಬಿಕೆಯಿಟ್ಟಿದ್ದರು. ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಜ್ಞಾನ ಹೊಂದಿದ್ದರು. ಸಮಾಜದ ಸದೃಢತೆಗೆ ದೂರ ದೃಷ್ಟಿ ಹೊಂದಿದ್ದರು. ಅರಸು ಅವರ ಕೆಲವೊಂದು ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಅಡೆತಡೆಗಳನ್ನು ಮೆಟ್ಟಿನಿಂತು ಸಾಮಾಜಿಕ ನ್ಯಾಯಕ್ಕೆ ಹೋರಾಡಿದ ಅರಸು ಅವರು, ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಯೋಜನೆ ಒದಗಿಸಿದರು ಎಂದರು. ನೀರಾವರಿ ಯೋಜನೆ, ಭೂ ಸುಧಾರಣೆ ಮೂಲಕ ರೈತಾಪಿ ವರ್ಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಜೀತದಾಳುಗಳನ್ನು ಸ್ವತಂತ್ರಗೊಳಿಸಿದ ಶ್ರೇಯಸ್ಸು ಅರಸು ಅವರಿಗೆ ಸಲ್ಲುತ್ತದೆ. ಎಲ್ಲಾ ವರ್ಗದವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದವರು. ವಿಶಾಲ ಚಿಂತನೆ ಹಾಗೂ ಸಾಮಾಜಿಕ ಕಳಕಳಿಯ ಇಚ್ಛಾಶಕ್ತಿ ಹೊಂದಿದ್ದರು. ಹಾವನೂರು ಆಯೋಗದ ಮೂಲಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ, ಕೋಟ್ಯಂತರ ಮಂದಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟರು. ಇವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಅರಸು ಅವರ ಜನ್ಮದಿನ ಅಂಗವಾಗಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.

ಡಾ. ಜಮೀರ್ ಅಹಮ್ಮದ್ ಹಾಗೂ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ರಮ್ಯ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಶೈಲೇಂದ್ರ, ಆರಕ್ಷಕ ಇಲಾಖೆಯ ಸಹದೇವ್, ಪ.ಪಂ. ಆರೋಗ್ಯಾಧಿಕಾರಿ ಜಾಸಿಂಖಾನ್, ಪ.ಪಂ. ಸದಸ್ಯೆ ಶೀಲಾ ಡಿಸೋಜ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಜಮೀರ್ ಖಾನ್, ರಂಗಕಲಾವಿದ ಭರಮಣ್ಣ, ಜೋಯಪ್ಪ ಹಾನಗಲ್ಲು, ಬಿಸಿಎಂ ಇಲಾಖೆಯ ಮಂಜುನಾಥ್, ಶಿಕ್ಷಣ ಇಲಾಖೆಯ ಮಂಜೇಶ್, ಖಜಾನೆ ಸಹಾಯಕ ನಿರ್ದೇಶಕರು, ಭೂಮಾಪನಾ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.