ವೀರಾಜಪೇಟೆ, ಆ. ೧೭: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಕೊಟ್ಟೋಳಿ ಗ್ರಾಮದಲ್ಲಿ ಸೀವೇಜ್ ವೇಸ್ಟ್ ವಾಟರ್ (ಕಲುಷಿತ ನೀರನ್ನು ಶುದ್ಧಗೊಳಿಸುವ ಯೋಜನೆ)ಗೆ ಕಾಯ್ದಿರಿಸಿದ ಸ್ಥಳಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದು ಹಲವು ಸೂಚನೆಗಳನ್ನು ನೀಡಿದರು.
ಈ ಸಂದರ್ಭ ಸ್ಥಳದಲ್ಲಿದ್ದ ಗ್ರಾಮಸ್ಥರಿಗೆ ಕಾಮಗಾರಿಯ ವಿವರಣೆ ನೀಡಿ ಕಲುಷಿತ ನೀರನ್ನು ಶುದ್ಧಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಕಲುಷಿತ ನೀರನ್ನು ಶುದ್ಧೀಕರಣಗೊಳಿಸಿದ ಬಳಿಕ ಮರು ಬಳಕೆಗೆ ಯೋಗ್ಯವಾಗುವಂತೆ ಮಾಡುವ ಕಾಮಗಾರಿ ಎಂದು ತಿಳಿಸಿದರು.
ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು. ಸರಕಾರ ಗ್ರಾಮಗಳ ಅಭಿವೃದ್ದಿಗೆ ಹಲವು ಯೊಜನೆಗಳನ್ನು ಜಾರಿಗೆ ತರುತ್ತಿದೆ. ಅದರ ಸಮರ್ಪಕ ಬಳಕೆ ಆಗಬೇಕು. ವೀರಾಜಪೇಟೆ ಕ್ಷೇತ್ರ ಮಾದರಿ ಕ್ಷೇತ್ರವಾಗಿ ಹೊರಹೊಮ್ಮಬೇಕು. ಅದಕ್ಕೆ ಎಲ್ಲರ ಸಹಕಾರವೂ ಅಗತ್ಯ. ವೀರಾಜಪೇಟೆ ಕ್ಷೇತ್ರದ ಅಭಿವೃದ್ದಿ ಹಾಗೂ ಇಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸಿ ಸಹಕಾರ ನೀಡುವುದು ನನ್ನ ಗುರಿ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭ ಪುರಸಭೆಯ ಮುಖ್ಯ ಅಧಿಕಾರಿ ಪಿ.ಕೆ. ನಾಚಪ್ಪ, ಕೆದಮುಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಫ್ರೀ ಉತ್ತಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಇಸ್ಮಾಯಿಲ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.