ಮಡಿಕೇರಿ, ಆ. ೧೭: ಪ್ರಸಕ್ತ ಸಾಲಿನ ತಾಲೂಕುಮಟ್ಟದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿಯು ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ ಸಾಯಿ ಹಾಕಿ ಮೈದಾನದಲ್ಲಿ ನಡೆಯಿತು.
ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ಸಹಾಯಕ ನಿರ್ದೇಶಕರಾದ ಮಿನಿ ಉಣ್ಣಿರಾಜ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿದರು. ಪಂದ್ಯಾವಳಿಯ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ, ದೈಹಿಕ ಶಿಕ್ಷಣ ಶಿಕ್ಷಕರಾದ ರಾಕಿ ಪೂವಣ್ಣ, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನಿರ್ದೇಶಕ ಚಿದಾನಂದ ಎನ್.ಎಸ್., ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಗಿರಿಧರ ಗೌಡ, ಭಾಗಮಂಡಲ ದೈಹಿಕ ಶಿಕ್ಷಣ ಉಪನ್ಯಾಸಕರು, ಮೂರ್ನಾಡು ದೈಹಿಕ ಶಿಕ್ಷಣ ಉಪನ್ಯಾಸಕ ಬೋಪಣ್ಣ, ಇತರರು ಇದ್ದರು.
ಬಾಲಕಿಯರ ತಾಲೂಕು ಮಟ್ಟದ ಹಾಕಿ ಪಂದ್ಯಾವಳಿಯು ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಸಂತ ಮೈಕಲರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರ ನಡುವೆ ನಡೆಯಿತು. ಇದರಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ೪-೦ ಗೋಲ್ಗಳ ಅಂತರದಲ್ಲಿ ವಿಜೇತರಾದರು.
ಬಾಲಕರ ಪಂದ್ಯಾವಳಿಯು ಮೂರ್ನಾಡು ಪದವಿಪೂರ್ವ ಕಾಲೇಜು ಹಾಗೂ ಸಂತ ಮೈಕಲರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ನಡುವೆ ನಡೆಯಿತು. ಇದರಲ್ಲಿ ಸಂತ ಮೈಕಲರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ೩-೦ ಗೋಲ್ಗಳ ಅಂತರದಲ್ಲಿ ವಿಜೇತರಾದರು.