ಸೋಮವಾರಪೇಟೆ, ಸೆ. ೫: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೂರು ಗ್ರಾಮದ ಕಬ್ಬಿಣ ಸೇತುವೆಯಿಂದ ಡಿಬಿಡಿ ಎಸ್ಟೇಟ್ ಸಂಪರ್ಕಿಸುವ ರಸ್ತೆಗೆ ರೂ. ೧೦ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಿರು ಸೇತುವೆಯನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಮಂತರ್ ಅವರು, ಈ ಭಾಗದ ಸಾರ್ವಜನಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದ್ದು, ಸಂಪರ್ಕ ಸಾಧಿಸಲು ಸೇತುವೆಯ ನಿರ್ಮಾಣ ಅತೀ ಅಗತ್ಯವಾಗಿತ್ತು. ಇದನ್ನು ಆದ್ಯತೆಯ ಮೇರೆ ನಿರ್ಮಿಸಲಾಗಿದೆ ಎಂದರು. ಈ ಸಂದರ್ಭ ಪ್ರಮುಖರಾದ ಎಸ್.ಎಂ. ಚಂಗಪ್ಪ, ರೋಷನ್ ಪೂವಯ್ಯ, ಬಿ.ಬಿ. ಸತೀಶ್, ಸಬಿತಾ ಚನ್ನಕೇಶವ, ಕೆ.ಎಂ. ಲೋಕೇಶ್ ಸೇರಿದಂತೆ ಇತರರು ಇದ್ದರು.