ಸೋಮವಾರಪೇಟೆ,ಸೆ.೬: ತನ್ನ ಪತ್ನಿ ನಾಪತ್ತೆಯಾಗಿರುವುದಾಗಿ ಕಳೆದ ೨೦ ದಿನಗಳ ಹಿಂದೆ ಪತಿ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೆ, ನಾಪತ್ತೆಯಾಗಿರುವ ಮಹಿಳೆಯನ್ನು ನದಿಗೆ ತಾನೇ ತಳ್ಳಿರುವುದಾಗಿ ನೆರೆಮನೆಯ ವ್ಯಕ್ತಿಯೋರ್ವ ಪೊಲೀಸ್ ತನಿಖೆ ವೇಳೆ ಬಾಯ್ಬಿಟ್ಟಿರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ.
ಸೋಮವಾರಪೇಟೆ ಪೊಲೀಸ್ ಠಾಣೆಗೆ ಒಳಪಡುವ ಮಾದಾಪುರ ಉಪಠಾಣಾ ವ್ಯಾಪ್ತಿಯ ನಂದಿಮೊಟ್ಟೆಯಿAದ ಈ ಘಟನೆ ವರದಿಯಾಗಿದ್ದು, ನಾಪತ್ತೆಯಾಗಿರುವ ಮಹಿಳೆ ಇನ್ನೂ ಪತ್ತೆಯಾಗಿಲ್ಲ;ಇತ್ತ ತಾನೇ ನದಿಗೆ ತಳ್ಳಿರುವುದಾಗಿ ಬಾಯ್ಬಿಟ್ಟಿರುವ ವ್ಯಕ್ತಿ ನ್ಯಾಯಾಲಯದ ಅನುಮತಿಯ ಮೇರೆ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ಕಳೆದ ೨೦ ದಿನಗಳ ಹಿಂದೆ ನಂದಿಮೊಟ್ಟೆ ಗ್ರಾಮದ ಸುರೇಶ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ಪತ್ನಿ ಲತಾ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದು ಭಾಗದಲ್ಲಿ ಹುಡುಕಾಟ ಆರಂಭಿಸಿದ್ದರೆ, ಮತ್ತೊಂದು ಆಯಾಮದಲ್ಲಿ ತನಿಖೆಯನ್ನೂ ಕೈಗೊಂಡಿದ್ದರು.
ಈ ನಡುವೆ ಮಾದಾಪುರ ಹೊಳೆಯಲ್ಲಿ ಮಹಿಳೆಯೋರ್ವರ ಮೃತದೇಹ ತೇಲಿ ಹೋಗಿರುವ ಬಗ್ಗೆಯೂ ಮಾತುಗಳು ಕೇಳಿಬಂದಿದ್ದವು. ಅಪರಿಚಿತ ಮೃತದೇಹದ ಹುಡುಕಾಟವೂ ನಡೆಯಿತು. ಭಾರೀ ಮಳೆಯಾಗುತ್ತಿದ್ದ ಸಂದರ್ಭ ಮಾದಾಪುರ ಹೊಳೆಯೂ ತುಂಬಿ ಹರಿದಿದ್ದು, ಈವರೆಗೆ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇವೆಲ್ಲ ಬೆಳವಣಿಗೆಯ ನಡುವೆ ಸೋಮವಾರಪೇಟೆ ಪೊಲೀಸರು ತನಿಖಾ ಹಂತದಲ್ಲಿ ಮಹಿಳೆಯ ಮೊಬೈಲ್ ಸಂಖ್ಯೆ ಯನ್ನು ಪರಿಶೀಲನೆಗೆ ಒಳಪಡಿಸಿದ ಸಂದರ್ಭ ನೆರೆಮನೆಯ ನಿವಾಸಿ ಶರಣು ಎಂಬಾತ ಅತೀ ಹೆಚ್ಚು ಬಾರಿ ಕರೆ ಮಾಡಿರುವುದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು ನಿನ್ನೆ ದಿನ ಆತನನ್ನು ಠಾಣೆಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ ಸಂದರ್ಭ, ಕಳೆದ ೨೦ ದಿನಗಳ ಹಿಂದೆ ಈತನೇ ಲತಾ ಅವರನ್ನು ನದಿಗೆ ತಳ್ಳಿರುವುದಾಗಿ ಬಾಯಿಬಿಟ್ಟಿದ್ದಾನೆ.
ಈತನ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಧೀಶರ ಅನುಮತಿ ಪಡೆದು ಮತ್ತೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮತ್ತೊಂದೆಡೆ ನದಿಗೆ ತಳ್ಳಲ್ಪಟ್ಟಿದ್ದಾರೆ ಎನ್ನಲಾದ ಲತಾ ಅವರ ಪತ್ತೆಗೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನದಿಯಲ್ಲಿ ಕೊಚ್ಚಿಕೊಂಡು ಹೋಗಿರಬಹುದಾದ ಸಾಧ್ಯತೆ ಇರುವ ಹಿನ್ನೆಲೆ ಮಾದಾಪುರ ನದಿಯ ಅಂಚಿನಲ್ಲಿರುವ ಕೃಷಿಕರು, ನಿವಾಸಿಗಳಲ್ಲಿ ಮಹಿಳೆಯ ದೇಹ ಪತ್ತೆಯಾದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿರುವ ಸಂದೇಶಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.
ನಾಪತ್ತೆಯಾಗಿರುವ ಮಹಿಳೆಗೂ ನೆರೆಮನೆಯ ಶರಣು ಎಂಬಾತನಿಗೂ ಏರ್ಪಟ್ಟ ಜಗಳ ವಿಕೋಪಕ್ಕೆ ತಿರುಗಿ ಲತಾ ಅವರನ್ನು ನದಿಗೆ ತಳ್ಳಲಾಗಿದೆ ಎನ್ನಲಾಗಿದೆ. ಪೊಲೀಸರ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ.
- ವಿಜಯ್