ಸಿದ್ದಾಪುರ, ಸೆ. ೬: ಕಾಡಾನೆಯೊಂದು ಮನೆಯಂಗಳಕ್ಕೆ ಲಗ್ಗೆಯಿಟ್ಟು ಮನೆ ಸುತ್ತಲೂ ಓಡಾಡಿದ ಘಟನೆ ಸಮೀಪದ ಮೈಸೂರು ರಸ್ತೆಯ ಕರಡಿ ಕಾಡ್ ಕಾಫಿ ತೋಟದ ಮನೆಯೊಂದರಲ್ಲಿ ನಡೆದಿದೆ. ಕರಡಿಕಾಡು ಕಾಫಿ ತೋಟದ ಮಾಲೀಕರಾದ ಪ್ರತಾಪ್ ಮುತ್ತಣ್ಣ ಎಂಬವರ ಮನೆಯ ಅಂಗಳಕ್ಕೆ ಲಗ್ಗೆಯಿಟ್ಟ ಕಾಡಾನೆ ಮನೆಯಂಗಳದಲ್ಲಿ ಸಂಚರಿಸಿರುವ ದೃಶ್ಯಾವಳಿಗಳು ಅವರ ಮನೆಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ವೀರಾಜಪೇಟೆಯ ವಲಯ ಅರಣ್ಯ ಅಧಿಕಾರಿ ಶಿವರಾಂ ಅವರ ಬಳಿ ಚರ್ಚೆ ನಡೆಸಿ ಕೂಡಲೇ ಕರಡಿಗೋಡು ಭಾಗದಲ್ಲಿ ಹಾಗೂ ಸಿದ್ದಾಪುರದ ಮೈಸೂರು ರಸ್ತೆಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸಬೇಕೆಂದು ನಿರ್ದೇಶನ ನೀಡಿದರು. ಅಲ್ಲದೆ ವಸತಿ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಕಾಡಾನೆಗಳ ಚಲನವಲನವನ್ನು ಕಂಡುಹಿಡಿದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ದಾಳಿಗೆ ಮುಂದಾದ ಸಲಗ !

ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಕರಡಿಗೋಡು ಗ್ರಾಮದಲ್ಲಿ ಹಾಗೂ ಸಿದ್ದಾಪುರದ ಮೈಸೂರು ರಸ್ತೆ ಭಾಗದಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಸಂದರ್ಭ ಕಾರ್ಯಾಚರಣೆ ತಂಡದವರನ್ನು ಕಾಡಾನೆಯೊಂದು ಬೆನ್ನಟ್ಟಿ ದಾಳಿಗೆ ಮುಂದಾಗಿದೆ. ಸಿದ್ದಾಪುರ ಮೈಸೂರು ರಸ್ತೆಯ ಕಾಫಿ ತೋಟದೊಳಗೆ ಒಂಟಿ ಸಲಗವೊಂದು ಕಾರ್ಯಾಚರಣೆ ತಂಡದ ಸಿಬ್ಬಂದಿಗಳನ್ನು ಅಟ್ಟಾಡಿಸಿಕೊಂಡು ಬಂದಿದೆ. ಈ ಸಂದರ್ಭ ಸಿಬ್ಬಂದಿಗಳು ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಸಂದರ್ಭ ಬಿದ್ದು ಸಿಬ್ಬಂದಿಯ ತಲೆ ಹಾಗೂ ಕಾಲಿಗೆ ಗಾಯವಾಗಿದೆ. ಗಾಯಾಳುಗಳು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.