ಮಡಿಕೇರಿ, ಸೆ. ೬: ಕೇಂದ್ರ ಸರಕಾರ ಇತ್ತೀಚೆಗೆ ಘೋಷಿಸಿರುವ ಹೊಸ ಜಿ.ಎಸ್.ಟಿ ನೀತಿ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಶೇ.೧೨ ಮತ್ತು ಶೇ.೨೮ ರ ತೆರಿಗೆ ಸ್ಲಾö್ಯಬ್‌ಗಳನ್ನು ತೆಗೆದು ಹಾಕಿ ಶೇ.೫ ಮತ್ತು ಶೇ. ೧೮ ರ ಸ್ಲಾö್ಯಬ್‌ನ್ನು ಮಾತ್ರ ಉಳಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕೊಡಗು ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಧಾನಮಂತ್ರಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ನಾಲ್ಕು ಹಂತದ ಜಿ.ಎಸ್.ಟಿ. ನೀತಿಯನ್ನು ಕಡಿತಗೊಳಿಸಿ ಎರಡಕ್ಕೆ ಸೀಮಿತಗೊಳಿಸುವ ಮೂಲಕ ಜನಪರ ಕಾಳಜಿ ತೋರಿದೆ. ಈ ಕ್ರಮದಿಂದ ಅನೇಕ ವಸ್ತುಗಳ ಬೆಲೆ ಕಡಿಮೆಯಾಗಲಿದ್ದು, ಬಡವರ ಹಾಗೂ ಜನಸಾಮಾನ್ಯರ ಆರ್ಥಿಕ ಬಲ ಸುಧಾರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ಬಡವರ ವಿಮೆ ಹೊಂದಿದ ಹಾಗೂ ಮಧ್ಯಮ ವರ್ಗದ ಜನರ ಸ್ವಂತ ಮನೆ ಹೊಂದುವ ಕನಸು ನನಸಾಗಲಿದೆ. ಇದು ಸಾಕಷ್ಟು ಜನರಿಗೆ ದೊಡ್ಡ ಲಾಭವಾಗಲಿದೆ. ದೇಶದಲ್ಲಿ ದೊಡ್ಡ ಆರ್ಥಿಕ ಕ್ರಾಂತಿಯೇ ನಡೆಯಲಿದ್ದು, ಇತರ ರಾಷ್ಟçಗಳಿಗೆ ಭಾರತ ಅಭಿವೃದ್ಧಿ ಕಾರ್ಯಗಳ ಮೂಲಕವೇ ಪ್ರತ್ಯುತ್ತರ ನೀಡಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ಜನಪರ ಕಾಳಜಿಯಿಂದ ಅನೇಕ ತೆರಿಗೆ ಸುಧಾರಣೆಗಳನ್ನು ಮಾಡಿದ್ದರೂ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಕೇವಲ ಜಿ.ಎಸ್.ಟಿ. ನೀತಿಯನ್ನು ಟೀಕಿಸುವುದರಲ್ಲೇ ಕಾಲಹರಣ ಮಾಡುತ್ತಿದೆ. ರಾಜ್ಯದಲ್ಲಿ ತಾನು ವಿಧಿಸಿರುವ ಹೆಚ್ಚಿನ ಸೆಸ್ ಮತ್ತು ತೆರಿಗೆಗಳನ್ನು ಇಳಿಕೆ ಮಾಡುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂದು ನಾಪಂಡ ರವಿ ಕಾಳಪ್ಪ ಟೀಕಿಸಿದ್ದಾರೆ.