ವೀರಾಜಪೇಟೆ, ಸೆ. ೬: ಅದ್ಧೂರಿತನದಿಂದ ನಡೆಯುವ ಐತಿಹಾಸಿಕ ವೀರಾಜಪೇಟೆ ಗಣೇಶ ವಿಸರ್ಜನೋತ್ಸವಕ್ಕೆ ಮಳೆರಾಯ ಅವಕೃಪೆ ತೋರಿದ ಪರಿಣಾಮ ಶೋಭಾಯಾತ್ರೆ ಹೊರಡುವುದು ಈ ಹಿಂದಿನ ವರ್ಷಗಳಿಗಿಂತ ಕೊಂಚ ವಿಳಂಬವಾಯಿತು.

ಏಕಕಾಲದಲ್ಲಿ ನಡೆಯುವ ೨೨ ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಸಂಭ್ರಮಕ್ಕೆ ಮಳೆ ತಣ್ಣೀರೆರಚಿತು.

ಸಂಜೆಯಿAದಲೇ ಇದ್ದ ಮೋಡ ಕವಿದ ವಾತಾವರಣ ಜನರ ಸಂಭ್ರಮವನ್ನು ಮಂಕಾಗಿಸಿತು. ೬ ಗಂಟೆ ವೇಳೆಯಲ್ಲಿ ಸುರಿಯಲಾರಂಭಿಸಿದ ಮಳೆ ೮ ಗಂಟೆ ತನಕವೂ ಅರ್ಭಟವನ್ಮು ಮುಂದುವರೆಸಿತು. ನಗರ ಸೇರಿದಂತೆ ವಿವಿಧೆಡೆಗಳಿಂದ ವಿಸರ್ಜನೋತ್ಸವವನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದ ಜನರಿಗೆ ಮಳೆ ನಿರಾಸೆ ಭಾವ ಮೂಡಿಸಿತು. ಮಳೆಯಿಂದ ಆಚರಣೆ ಅಸ್ತವ್ಯಸ್ತಗೊಂಡಿತು. ೮.೩೦ರ ವೇಳೆಗೆ ವರುಣನ ಅಬ್ಬರ ತಗ್ಗಿದ ಹಿನ್ನೆಲೆ ಸಂಭ್ರಮದ ಕಳೆ ಮರು ಸೃಷ್ಟಿಯಾಯಿತು.

ಆದರೆ, ಮಳೆಯ ಅವಕೃಪೆಯಿಂದ ಸಮಿತಿಗಳು ಪೇಚಿಗೆ ಸಿಲುಕುವಂತಹ ಪರಿಸ್ಥಿತಿ ತಲೆದೋರಿತು. ನಿಗದಿತ ಸಮಯಕ್ಕಿಂತ ತಡವಾಗಿ ಮಂಟಪ ಹೊರಡುವ ಪರಿಸ್ಥಿತಿ ನಿರ್ಮಾಣಗೊಂಡಿತು. ಮಳೆಯಿಂದ ಮಂಟಪ, ಪ್ರಭಾವಳಿ, ಧ್ವನಿವರ್ದಕ ಸೇರಿದಂತೆ ಅಂತಿಮ ತಯಾರಿಗೆ ಮತ್ತಷ್ಟು ಸಮಯ ತೆಗೆದುಕೊಂಡು ಶೋಭಾಯಾತ್ರೆ ಆರಂಭದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಆದರೂ ಎದೆಗುಂದದ ಸಮಿತಿ ಸದಸ್ಯರುಗಳು ಮಳೆಯ ನಡುವೆ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕಾರ್ಯನಿರ್ವಹಿಸಿ ಮಂಟಪವನ್ನು ಆಕರ್ಷಕವಾಗಿ ಸಜ್ಜುಗೊಳಿಸಿ ಮೆಚ್ಚುಗೆಗೆ ಪಾತ್ರರಾದರು. ರಾತ್ರಿ ೯.೩೦ರ ನಂತರ ಹಿಂದಿನ ವರ್ಷದಂತೆ ಉತ್ಸವ ವರ್ಣರಂಜಿತವಾಗಿ ಆರಂಭವಾಯಿತು. ಚಿತ್ತಾಕರ್ಷಕ ಬೆಳಕು, ಡಿಜೆ ಅಬ್ಬರ ಜನತೆಯನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.

ಸಾಂಪ್ರದಾಯಿಕ ಚಾಲನೆ

ಪಟ್ಟಣದ ಗಡಿಯಾರ ಕಂಬದ ಬಳಿಯ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಲಂಕೃತ ವಾಹನದಲ್ಲಿ ಗಣಪತಿ ಮೂರ್ತಿಯನ್ನು ರಾತ್ರಿ ೯.೨೦ಕ್ಕೆ ಪ್ರತಿಷ್ಠಾಪಿಸಿ ೯.೩೦ಕ್ಕೆ ಸಿಡ್ಡಿಮದ್ದು ಸಿಡಿಸಿ ಇತರ ಸಮಿತಿಗಳು ಮೂರ್ತಿಯನ್ನು ಮಂಟಪಕ್ಕೆ ಸ್ಥಳಾಂತರಿಸಿ ಮೆರವಣಿಗೆಗೆ ಸಜ್ಜಾಗುವಂತೆ ಸಂದೇಶ ನೀಡುವ ಮೂಲಕ ವಿಸರ್ಜನೋತ್ಸವಕ್ಕೆ ಮುನ್ನುಡಿಯಿಡಲಾಯಿತು.

ಆನಂತರ ೧೦೧ ಈಡುಗಾಯಿಯನ್ನು ಅರ್ಪಿಸಿ ಉತ್ಸವದ ಸಾರಥಿಯಾದ ಶ್ರೀ ಮಹಾಗಣಪತಿ ದೇವಾಲಯದ ಮೂರ್ತಿಯನ್ನು ಮೆರವಣಿಗೆ ಮೂಲಕ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯಕ್ಕೆ ಕೊಂಡೊಯ್ದು ಅಲ್ಲಿ ಪ್ರದೇಶ ಗೌರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಉಳಿದ ಎಲ್ಲಾ ಮಂಟಪಗಳ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ದೊರೆಯಿತು. ಬಳಿಕ ಉಳಿದ ೨೧ ಸಮಿತಿಗಳು ಮಂಟಪದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮುಂದಾದವು.

ಎಡಿಜಿಪಿ-ಐಜಿಪಿ ಭೇಟಿ

ವಿಸರ್ಜನೋತ್ಸವ ಭದ್ರತೆ ಪರಿಶೀಲನೆಗಾಗಿ ಎಡಿಜಿಪಿ ಬಿ.ಕೆ. ಸಿಂಗ್ ಹಾಗೂ ಐಜಿಪಿ ಬೋರಲಿಂಗಯ್ಯ ವೀರಾಜಪೇಟೆಗೆ ಆಗಮಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಡಿ.ವೈ.ಎಸ್.ಪಿ. ಮಹೇಶ್ ಕುಮಾರ್ ಅವರೊಂದಿಗೆ ಚರ್ಚಿಸಿ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಿದರು.

ಹೈ ಅಲರ್ಟ್ : ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಖಾಕಿ ಪಡೆ ಹದ್ದಿನ ಕಣ್ಣಿಟ್ಟು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕೈಗೊಂಡಿತ್ತು. ೧೨೦೦ಕ್ಕೂ ಹೆಚ್ಚು ಪೊಲೀಸರ ಕಣ್ಗಾವಲ್ಲಿತ್ತು. ಜನದಟ್ಟಣೆ ಆಗುವ ಹಿನ್ನೆಲೆ ಸಂಜೆ ವೇಳೆಯಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿತ್ತು. ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ೭ ಉಪಾಧೀಕ್ಷಕರು, ೭ ವೃತ್ತ ನಿರೀಕ್ಷಕರು, ೧೦ ಉಪನಿರೀಕ್ಷಕರು, ೩೦ ಸಹಾಯಕ ಉಪನಿರೀಕ್ಷಕರು, ೫೭೫ ಪೊಲೀಸ್ ಸಿಬ್ಬಂದಿಗಳು, ೧೦೦ ಹೋಂ ಗಾರ್ಡ್ಸ್ ಒಳಗೊಂಡAತೆ ೫ ಕೆ.ಎಸ್.ಆರ್.ಪಿ., ಡಿ.ಎ.ಆರ್. ತುಕಡಿಗಳನ್ನು ನಿಯೋಜಿಸಲಾಗಿತ್ತು. ಕೊಡಗು ಸೇರಿದಂತೆ ಮೈಸೂರು, ಹಾಸನ ಜಿಲ್ಲೆಯಿಂದಲೂ ಪೊಲೀಸರು ಭದ್ರತೆಗಾಗಿ ಆಗಮಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದAತೆ ಎಚ್ಚರವಹಿಸುವ ಸಲುವಾಗಿ ಆಯಕಟ್ಟು ಪ್ರದೇಶದಲ್ಲಿ ಪೊಲೀಸರ ಕಣ್ಗಾವಲ್ಲಿರಿಸಿದ್ದರು. ಮಂಟಪಗಳು ತೆರಳುವ ಸ್ಥಳದಿಂದ ಸಾಗುವ ಮಾರ್ಗದಲ್ಲೂ ನಿಗದಿತ ಪೊಲೀಸರನ್ನು ನೇಮಿಸಲಾಗಿತ್ತು. ಇದರೊಂದಿಗೆ ೫೦ ಮಂದಿಯ ಜಂಬೋ ತಂಡ, ೩೦ ಮಂದಿಯ ಚೀತಾ ತಂಡ, ಕ್ಯಾಮರಾಮೆನ್‌ಗಳ ತಂಡ ಕಾರ್ಯನಿರ್ವಹಿಸಿತು.

ವರದಿ : ರಾಕೇಶ್, ಕಿಶೋರ್ ಶೆಟ್ಟಿ