ಕೂಡಿಗೆ, ಸೆ. ೬: ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ತಂಬಾಕು ನಿಯಂತ್ರಣ ತನಿಖಾ ತಂಡ ಮತ್ತು ಜಿಲ್ಲಾ ತಂಡವು ಶಿರಂಗಾಲ ಗ್ರಾಮದ ವಿವಿಧ ಅಂಗಡಿ, ಹೊಟೇಲ್, ಬೇಕರಿ ಮತ್ತು ಬಾರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿತು.

ನಿಯಮ ಉಲ್ಲಂಘನೆ ಮಾಡಿದ ೧೦ ಪ್ರಕರಣಗಳನ್ನು ಗುರುತಿಸಿ ರೂ. ೧.೨೬೦ ದಂಡ ವಿಧಿಸಲಾಯಿತು. ಸುತ್ತಮುತ್ತಲಿನ ಹಾಗೂ ಒಳಾಂಗಣದ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು.

ಅಯೋಡಿನ್‌ಯುಕ್ತ ಉಪ್ಪಿನ ಸರಿಯಾದ ಬಳಕೆ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾಹಿತಿಯನ್ನು ನೀಡಿದರು. ಈ ತಂಡದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಸಂಜಯ್ ಕುಮಾರ್ ತಂಬಾಕು ತನಿಖಾ ತಂಡದ ಪುನೀತ ಮತ್ತು ಮಂಜುನಾಥ್ ಪಾಲ್ಗೊಂಡಿದ್ದರು.