ಕೂಡಿಗೆ, ಸೆ. ೭: ಕೂಡಿಗೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಅವರು ಉಚಿತ ನೋಟ್ ಪುಸ್ತಕ ವಿತರಣೆ ಮಾಡಿದರು

ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಕಠಿಣ ಪರಿಶ್ರಮ, ಸತತ ಪ್ರಯತ್ನ ನಿರಂತರ ಅಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ತಾವು ಪ್ರತಿವರ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ನೀಡುತ್ತಾ ಬರಲಾಗುತ್ತಿದೆ ಎಂದರು.

ಶಾಲಾ ಮುಖ್ಯ ಶಿಕ್ಷಕಿ ಸಣ್ಣಕ್ಕ ಮಾತನಾಡಿ, ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ದಾನಿ ಹರಪಳ್ಳಿ ರವೀಂದ್ರ ಅವರು ತಮ್ಮ ದುಡಿಮೆಯ ಒಂದಷ್ಟು ಪಾಲನ್ನು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಹಾಗೂ ಸಾಮಾಜಿಕ ಕಾರ್ಯಗಳಿಗೆ ನಿರಂತರವಾಗಿ ಸಹಾಯಹಸ್ತ ನೀಡುತ್ತಿರುವುದು ಶ್ಲಾಘನೀಯ ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಮೇಘ ಪ್ರಸನ್ನ, ಶಿಕ್ಷಕರಾದ ಕಮಲ, ವಿಜಯಲಕ್ಷಿö್ಮ, ದೀಪಿಕಾ, ಜೇನುಕಲ್ಲು ಬೆಟ್ಟದ ಶಾಲಾ ಶಿಕ್ಷಕಿ ಎಂ.ಎ. ಕಾಶಿಫ್, ಹರಪಳ್ಳಿ ರವೀಂದ್ರ ಅವರ ಪುತ್ರ ಅಚ್ಚಲ್ ರವೀಂದ್ರ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.