ಸೋಮವಾರಪೇಟೆ, ಸೆ. ೭: ಈ ಹಿಂದೆ ಇದ್ದ ಪೈಸಾರಿ ಸರ್ಕಾರಿ ಜಮೀನು, ನಂತರದ ದಿನಗಳಲ್ಲಿ ಸಿ ಮತ್ತು ಡಿ ಜಾಗವಾಗಿ ಪರಿವರ್ತನೆಗೊಂಡು ಇದೀಗ ರೈತರ ನೆಮ್ಮದಿ ಕಸಿಯುವಂತೆ ಮಾಡಿರುವ ಅರಣ್ಯ ಇಲಾಖೆಯ ಕ್ರಮಗಳ ಮುಂದುವರಿದ ಭಾಗವಾಗಿ ಸೆಕ್ಷನ್-೪ ಉದ್ಘೋಷಣೆ ಹೊರಬರುತ್ತಿದ್ದು, ಪಟ್ಟಣ ಸಮೀಪದ ನೇಗಳ್ಳೆ ಕರ್ಕಳ್ಳಿ ಗ್ರಾಮದ ೩೦ ಹೆಕ್ಟೇರ್ ಜಾಗದ ಸರ್ವೆಗೆ ಅರಣ್ಯ ಇಲಾಖೆ ನೋಟಿಸ್ ಹೊರಡಿಸಿದೆ.

ಸರ್ಕಾರಿ ಪೈಸಾರಿ ಜಮೀನು, ಸಿ ಮತ್ತು ಡಿ ಜಾಗದಲ್ಲಿ ಬಹುತೇಕ ಕೃಷಿಕರು ಹಲವು ದಶಕಗಳಿಂದಲೇ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸಾವಿರಾರು ಏಕರೆ ಕಾಫಿ, ಏಲಕ್ಕಿ ತೋಟ, ಗದ್ದೆಗಳು ನಿರ್ಮಾಣಗೊಂಡು ಕೃಷಿಕರು ಜೀವನ ನಡೆಸುತ್ತಿದ್ದಾರೆ. ತಾವು ಉಳುಮೆ ಮಾಡಿರುವ ಜಾಗಕ್ಕೆ ಸರ್ಕಾರದಿಂದ ಅಧಿಕೃತ ದಾಖಲೆಗಳನ್ನು ನೀಡುವಂತೆ ಫಾರಂ ೫೦, ೫೩, ೯೪ ಸಿ. ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಸರ್ಕಾರದ ಇತ್ತೀಚಿನ ಆದೇಶದನ್ವಯ ಭೋಗ್ಯಕ್ಕೆ ಪಡೆಯುವ ಯೋಜನೆಯಲ್ಲೂ ಅರ್ಜಿ ನೀಡಿದ್ದಾರೆ.

ಸಿ ಮತ್ತು ಡಿ ಜಾಗವನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆಯುವ, ಅರಣ್ಯ ಕಲಂ ೪ರಂತೆ ಈವರೆಗೆ ಶಾಂತಳ್ಳಿ ಹೋಬಳಿಯ ಗ್ರಾಮಗಳಿಗೆ ಬರುತ್ತಿದ್ದ ನೋಟಿಸ್‌ಗಳು ಇದೀಗ ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಗೂ ಬರುತ್ತಿದೆ.

ಸಿ ಮತ್ತು ಡಿ ಜಾಗವನ್ನು ಅರಣ್ಯ ಇಲಾಖೆಯ ಸುಪರ್ದಿಗೆ ಪಡೆಯಲು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವ ಭಾಗವಾಗಿ ಈಗಾಗಲೇ ಅರಣ್ಯ ವ್ಯವಸ್ಥಾಪನಾಧಿಕಾರಿ ಹುದ್ದೆಯನ್ನು ಸೃಜಿಸಿ ಮೈಸೂರಿನಲ್ಲಿ ಕಚೇರಿಯನ್ನೂ ತೆರೆಯಲಾಗಿದೆ. ನಿವೃತ್ತ ಎಎಎಸ್ ಅಧಿಕಾರಿ ರೇಣುಕಾಂಬ ಎಂಬವರನ್ನು ಅರಣ್ಯ ವ್ಯವಸ್ಥಾಪನಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರಿ ಸವಲತ್ತು ಹಾಗೂ ಅಧಿಕಾರ ನೀಡಲಾಗಿದೆ.

ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಸಿ ಮತ್ತು ಡಿ ಜಾಗವನ್ನೂ ಒಳಗೊಂಡAತೆ ಇತರ ಸರ್ಕಾರಿ ಜಾಗಗಳನ್ನು ಸೆಕ್ಷನ್ ೪ ರನ್ವಯ ಅಧಿಸೂಚನೆ ಹೊರಡಿಸಿ ನೋಟಿಸ್ ರವಾನಿಸುತ್ತಿದ್ದಾರೆ. ಅಂತೆಯೇ ನೇಗಳ್ಳೆ ಕರ್ಕಳ್ಳಿ ಗ್ರಾಮದಲ್ಲಿ ಅನೇಕ ದಶಕಗಳ ಹಿಂದೆಯೇ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡಿರುವ ಜಾಗವನ್ನು ಅಧಿಸೂಚನೆಯ ವ್ಯಾಪ್ತಿಯೊಳಗೆ ಒಳಪಡಿಸಿ ನೋಟಿಸ್ ನೀಡಿದ್ದಾರೆ.

ಮೇಲಧಿಕಾರಿಗಳ ಆದೇಶದನ್ವಯ ಸ್ಥಳೀಯ ಅರಣ್ಯಾಧಿಕಾರಿಗಳು ಈ ಜಾಗದ ಸರ್ವೆಗೆ ಮುಂದಾಗಿದ್ದಾರೆ. ಇಂದು ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳ ಕಚೇರಿಯಿಂದ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ರವಾನೆಯಾಗಿದ್ದು, ಇದರಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ೧೯೬೩ರ ಕಲಂ ೪ರಡಿಯಲ್ಲಿ ಅಧಿಸೂಚನೆಗೊಂಡ ಸೋಮವಾರಪೇಟೆ ವಲಯದ ಬೇಳೂರು ಶಾಖೆಗೆ ಒಳಪಟ್ಟ ನೇಗಳ್ಳೆ ಕರ್ಕಳ್ಳಿ ಗ್ರಾಮದ ಸ.ನಂ. ೨೨೬/೨ ಹಾಗೂ ೨೩೫ರ ಒಟ್ಟು ೩೦ ಹೆಕ್ಟೇರ್ ಜಾಗವಿದ್ದು, ಇದನ್ನು ಕೂಡಲೇ ಜಂಟಿ ಸರ್ವೆ ನಡೆಸಿ, ಗಡಿ ಗುರುತಿಸುವಂತೆ ಮೇಲಧಿಕಾರಿಗಳಿಂದ ಆದೇಶ ಬಂದಿದ್ದು, ತಾ. ೧೦ರಂದು ಸರ್ವೆ ನಡೆಸುವಂತೆ ತಿಳಿಸಲಾಗಿದೆ.

ಇದು ಅತ್ಯಂತ ಜರೂರು ಮತ್ತು ಸೂಕ್ಷö್ಮ ವಿಷಯವಾಗಿರುವುದರಿಂದ ವಿಳಂಬಕ್ಕೆ ಆಸ್ಪದ ನೀಡದೇ ಸಿಬ್ಬಂದಿಯನ್ನು ನೇಮಿಸಿ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡುವಂತೆ ಪತ್ರದಲ್ಲಿ ಸೂಚಿಸಲಾಗಿದೆ.

ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಸಹಿತ ತಹಶೀಲ್ದಾರ್, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳಿಗೂ ಕಳುಹಿಸಲಾಗಿದೆ. ಇದೀಗ ಅಧಿಸೂಚನೆ ಹೊರಡಿಸಿರುವ ಜಾಗವನ್ನು ಕೃಷಿಕರು ಅನೇಕ ವರ್ಷಗಳ ಹಿಂದೆಯೇ ಒತ್ತುವರಿ ಮಾಡಿಕೊಂಡು ಕಾಫಿ, ಕರಿಮೆಣಸು ಬೆಳೆಗಳೊಂದಿಗೆ ಅಸಂಖ್ಯಾತ ಮರಗಿಡಗಳನ್ನು ಬೆಳೆಸಿದ್ದಾರೆ. ಈ ಹಿಂದೆ ಇದ್ದ ಆರ್‌ಟಿಸಿ ಪಟ್ಟಾ ಕಾಲಂನಲ್ಲಿ ಸರ್ಕಾರಿ ಪೈಸಾರಿ ಎಂದು ನಮೂದಾಗಿದ್ದು, ಇದರನ್ವಯ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿಯನ್ನೂ ಸಲ್ಲಿಸಿಕೊಂಡು ಬಂದಿದ್ದಾರೆ. ಆದರೆ ಇತ್ತೀಚೆಗೆ ಆರ್‌ಟಿಸಿಯ ಪಟ್ಟಾ ಕಲಂನಲ್ಲಿ ಮೀಸಲು ಅರಣ್ಯ, ಅರಣ್ಯ ಇಲಾಖೆ ಎಂದು ನಮೂದಾಗಿದ್ದು, ರೈತರ ನಿದ್ದೆಗೆಡಿಸಿದೆ.

ತಾಲೂಕು ರೈತ ಹೋರಾಟ ಸಮಿತಿಯಿಂದ ಭೂ ದಾಖಲೆಗಳ ಸಮಸ್ಯೆಗಳ ವಿರುದ್ಧ, ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಈಗಾಗಲೇ ಪ್ರತಿಭಟನೆ, ಬಂದ್‌ಗಳೂ ನಡೆದಿವೆ. ಮುಖ್ಯಮಂತ್ರಿ, ಕಂದಾಯ, ಅರಣ್ಯ ಇಲಾಖಾ ಸಚಿವರು, ಇಲಾಖಾ ಕಾರ್ಯದರ್ಶಿಗಳನ್ನೂ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಇವುಗಳಿಗೆ ಕ್ಯಾರೇ ಎನ್ನದೇ ಅರಣ್ಯ ಇಲಾಖಾ ಅಧಿಕಾರಿಗಳು ತಮ್ಮ ಅಧಿಕಾರ ಬಳಸಿ ನೋಟಿಸ್ ನೀಡುತ್ತಿದ್ದಾರೆ. ಇದರಿಂದಾಗಿ ದಶಕಗಳಿಂದಲೂ ನೆಲೆ ಕಂಡುಕೊAಡಿರುವ ರೈತರು ನೆಮ್ಮದಿ ಕಳೆದುಕೊಳ್ಳುವ ಸನ್ನಿವೇಶ ನಿರ್ಮಾಣವಾಗಿದೆ.