ಕೂಡಿಗೆ, ಸೆ. ೯: ರೂ. ೩.೮೦ ಕೋಟಿ ವೆಚ್ಚದಲ್ಲಿ ಕೂಡಿಗೆ- ಹೆಬ್ಬಾಲೆ ರಸ್ತೆಯ ಮರುಡಾಂಬರೀಕರಣ ಮತ್ತು ವಿಭಜಕ ನಿರ್ಮಾಣಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತÀರ್ ಗೌಡ ಭೂಮಿಪೂಜೆ ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕರು, ಈಗಾಗಲೇ ಕೂಡಿಗೆ-ಕುಶಾಲನಗರ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಯು ಆರಂಭಗೊAಡಿದೆ, ಅದೇ ಮಾದರಿಯಲ್ಲಿ ಉತ್ತಮ ಗುಣಮಟ್ಟದಲ್ಲಿ ಕೂಡಿಗೆ-ಹೆಬ್ಬಾಲೆ ರಸ್ತೆ ಕಾಮಗಾರಿಯು ನಡೆಯಲಿದೆ. ಈಗಾಗಲೇ ವಿವಿಧ ಯೋಜನೆಯ ಮುಖಾಂತರ ಗ್ರಾಮಾಂತರ ಪ್ರದೇಶಗಳ ರಸ್ತೆಯ ಅಭಿವೃದ್ಧಿಗೆ ಹೆಚ್ಚು ಹಣವನ್ನು ಕಾಯ್ದಿರಿಸಲಾಗಿದೆ. ಕ್ರಿಯಾಯೋಜನೆ ಪೂರ್ಣಗೊಂಡು ವಿವಿಧ ಹಂತಗಳಲ್ಲಿ ಗ್ರಾಮಾಂತರ ಪ್ರದೇಶದ ರಸ್ತೆಗಳ ಕಾಮಗಾರಿಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಹಾಸನ ಹೆದ್ದಾರಿ ಮತ್ತು ಸೋಮವಾರಪೇಟೆ ಸಂಪರ್ಕ ರಸ್ತೆಯಾದ ಹಳೆ ಕೂಡಿಗೆ ರಸ್ತೆಯ ಕಾಂಕ್ರಿಟೀಕರಣವೂ ಆರಂಭಗೊಳ್ಳಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಮಡಿಕೇರಿ ಕ್ಷೇತ್ರದ ಶಾಸಕರು ಈಗಾಗಲೇ ಕುಶಾಲನಗರ ತಾಲೂಕು ವ್ಯಾಪ್ತಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಎಂದರು.

ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಅನಂತ, ಎಸ್.ಆರ್. ಅರುಣ್ ರಾವ್, ಟಿ.ಪಿ. ಹಮೀದ್, ಮೋಹಿನಿ, ಶಿವಕುಮಾರ್, ಹೆಚ್.ಎಸ್. ರವಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೆಚ್.ಎಸ್. ಕುಮಾರ್, ಇಂಜಿನಿಯರ್ ಅರ್ಬಾಜ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೋಭಾ ಪುಟ್ಟಪ್ಪ ಸೇರಿದಂತೆ ಪಕ್ಷದ ಕಾರ್ಯಕರ್ತೆರು, ವಿವಿಧ ಘಟಕದ ಪದಾಧಿಕಾರಿಗಳು, ಅಧಿಕಾರಿ ವರ್ಗದವರು, ಸಾರ್ವಜನಿಕರು ಹಾಜರಿದ್ದರು.