ಕೊಡಗು ಜಿಲ್ಲೆ, ತನ್ನದೇ ಆದ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದೆ. ಸುಂದರ ಪರ್ವತ ಶ್ರೇಣಿಗಳು, ಅದರ ಮಧ್ಯಮಧ್ಯ ಮಿಂಚು ಕೊಳದಂತೆ ಹರಿಯುವ ಜರಿಗಳು, ತಗ್ಗು ಪ್ರದೇಶದಲ್ಲಿ ಹಸಿರಿನ ಸೀರೆ ಉಟ್ಟಂತೆ ಇರುವ ಗದ್ದೆಗಳು, ಕಾಫಿ ತೋಟಗಳು ವಿಶ್ವದಲ್ಲೇ ಪ್ರಸಿದ್ದಿ. ಆದರೆ ಮಳೆಯ ನಾಡಾದ ನಮ್ಮ ಪುಟ್ಟ ಕೊಡಗಿನಲ್ಲಿ ‘ರಸ್ತೆ'ಗಳು ರಸ್ತೆಗಳಾಗಿಯೇ ಉಳಿಯಲು ಹಾಗೂ ಅದರ ನಿರ್ವಹಣೆ ಒಂದು ದೊಡ್ಡ ಸವಾಲು. ನಾಡು, ನುಡಿ ಹಾಗೂ ಇಲ್ಲಿಯ ಸಂಸ್ಕೃತಿ ಎಷ್ಟು ಶ್ರೀಮಂತವಾಗಿದ್ದರೂ ಈ ಸುಂದರ ಪುಟ್ಟ ನಾಡಿನಲ್ಲಿ ಓಡಾಡಲು ಒಳ್ಳೆಯ ರಸ್ತೆಗಳೇ ಇಲ್ಲದಂತಾಗಿದೆ. ಕೊಡಗಿನಲ್ಲಿ ಒಟ್ಟು ೧೬೮೭ ಕಿಲೋಮೀಟರ್ ಅಷ್ಟು ರಸ್ತೆಗಳಿವೆ. ಇದರಲ್ಲಿ ೫೬೪ ಕಿಲೋಮೀಟರ್ ರಾಜ್ಯ ಹೆದ್ದಾರಿ ಒಳಗೊಂಡಿದೆ.
ವಿಭಾಗ ರಾಜ್ಯ ಹೆದ್ದಾರಿ ಮುಖ್ಯ ಜಿಲ್ಲಾ ರಸ್ತೆ
ಮಡಿಕೇರಿ ವಿಭಾಗ ೧೫೪ ಕಿಲೋಮೀಟರ್ ೩೩೨ ಕಿ.ಮೀ.
ಸೋಮವಾರಪೇಟೆ ವಿಭಾಗ ೨೫೩ ಕಿಲೋಮೀಟರ್ ೩೩೩ ಕಿಲೋಮೀಟರ್.
ವೀರಾಜಪೇಟೆ ವಿಭಾಗ ೧೫೭ ಕಿಲೋಮೀಟರ್ ೪೫೮ ಕಿಲೋಮೀಟರ್
ಕೊಡಗಿನ ರಸ್ತೆಗಳ ಇತಿಹಾಸವನ್ನೊಮ್ಮೆ ಇಣುಕಿ ನೋಡಿದರೆ ಬ್ರಿಟಿಷ್ ಪೂರ್ವಕಾಲ ೧೮೩೪ ರ ಮೊದಲು ರಾಜರ ಕಾಲದಲ್ಲಿ ಹೆಚ್ಚಿನ ರಸ್ತೆಗಳು ಅರಣ್ಯ ಹಾಗೂ ಬೆಟ್ಟ ಗುಡ್ಡಗಳ ಕಣಿವೆಗಳ ಮೂಲಕ ಇದ್ದವು. ಇವುಗಳ ಮೂಲಕ ಪ್ರಾಣಿಗಳನ್ನು ಬಳಸಿ ಸರಕು ಸಾಗಾಣಿಕೆ ನಡೆಯುತ್ತಿತ್ತು. ಪ್ರತಿ ಗ್ರಾಮಗಳು ಸ್ವಾವಲಂಬಿಯಾಗಿದ್ದುದ್ದರಿAದ ಜನರಿಗೆ ದೂರದ ಪ್ರಯಾಣದ ಅಗತ್ಯ ಇರಲಿಲ್ಲ. ಮಳೆಗಾಲದಲ್ಲಿ ಮಣ್ಣು ದಾರಿ ಕೊಚ್ಚಿ ಹೋಗುತ್ತವೆ ಎಂದು ಸ್ಥಳೀಯರು ಪರ್ಯಾಯ ಮಾರ್ಗವಾಗಿ ಅರಣ್ಯದೊಳಗಿನ ಕಷ್ಟದ ದಾರಿಯನ್ನೇ ಹುಡುಕುತ್ತಿದ್ದರು.
೧೮೩೪ ರ ನಂತರ ಬ್ರಿಟಿಷ್ ಯುಗ. ೧೯೪೭ ರವರೆಗೆ ನಮ್ಮನ್ನಾಳಿದ ಬ್ರಿಟಿಷರು ಕೊಡಗಿನಲ್ಲಿ ಕಾಫಿ ಬೆಳೆಯಲು ಆರಂಭಿಸಿದ ಮೇಲೆ ಕಾಫಿಯನ್ನು ಬಂದರುಗಳಿಗೆ ತಲುಪಿಸಲು ಒಳ್ಳೆಯ ಸಂಪರ್ಕ ಅಗತ್ಯವಾಯಿತು. ಇದಕ್ಕೆ ಬ್ರಿಟಿಷರು ಬಳಸಿದ್ದು ಸ್ಥಳೀಯವಾಗಿ ಸಿಗುವ ಲ್ಯಾಟರೈಟ್ ಕಲ್ಲುಗಳನ್ನು ಹಾಸಿ ಅದರ ಮೇಲೆ ಸುಣ್ಣ ಹಾಗೂ ಮರಳಿನ ಮಿಶ್ರಣ ಹಾಕುತ್ತಿದ್ದರು. ರಸ್ತೆಯ ಮೇಲೆ ನೀರುಗಳು ಹರಿಯದಂತೆ ರಸ್ತೆಗಳ ಎರಡು ಬದಿಯಲ್ಲಿ ಕಲ್ಲಿನ ನೀರು ಹೊರೆ ಕಾಲುವೆಗಳನ್ನು ನಿರ್ಮಿಸಿ ನೀರಿನ ಹರಿವನ್ನು ನಿಯಂತ್ರಿಸಲು ಇಳಿಜಾರು ಪ್ರದೇಶಗಳಲ್ಲಿ ವಕ್ರದಾರಿಗಳ ನಿರ್ಮಿಸಿದರು. ಕಾಫಿಯ ಹಂಗಾಮಿನ ಅವಧಿಯಲ್ಲಿ ತ್ವರಿತ ದುರಸ್ತಿಗೆ ಎಂದು ಪ್ರತಿ ೧೦ ಕಿ.ಮೀ.ಗೆ ಇಬ್ಬರಂತೆ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದರು.
ಸಣ್ಣ ಸಣ್ಣ ಕುಳಿಗಳಾದರೂ ತಕ್ಷಣ ಮುಚ್ಚುತ್ತಿದ್ದರು. ಸೇತುವೆಗಳನ್ನು ಉಕ್ಕು ಮತ್ತು ಕಬ್ಬಿಣ ಬಳಸಿ ಕಲ್ಲಿನಿಂದ ಸುಣ್ಣದ ಗಾರೆ ಬಳಸಿ ನಿರ್ಮಿಸುತ್ತಿದ್ದರು. ಇಂತಹ ಕೆಲವು ಹಳೇ ಸೇತುವೆಗಳನ್ನು ನಾವು ಈಗಲೂ ಮಡಿಕೇರಿ - ಮಂಗಳೂರು ರಸ್ತೆಯಲ್ಲಿ ಕಾಣಬಹುದು.
೧೯೫೦ ರಿಂದ ೫೬ ರವರೆಗೆ ಕೊಡಗು ಸಿ ರಾಜ್ಯವಾಗಿ ಅಸ್ತಿತ್ವದಲ್ಲಿತ್ತು. ಆ ಸಂದರ್ಭದಲ್ಲಿ ಕನ್ವರ್ ಬಾಬಾ ದಯಾ ಸಿಂಗ್ ಬೇಡಿ ಮುಖ್ಯ ಆಯುಕ್ತರಾಗಿದ್ದರು. ಇವರಿಗಿಂತ ಮೊದಲು ಕೆ.ಎನ್. ಚಂಗಪ್ಪ ಕೊಡಗಿನ ಮುಖ್ಯ ಆಯುಕ್ತರಾಗಿದ್ದಾಗ ರಸ್ತೆ ನಿರ್ವಹಣೆಗೆಂದೆ ಪ್ರತ್ಯೇಕ ಬಜೆಟ್ ಇಟ್ಟಿದ್ದರು.
ದಯಾ ಸಿಂಗ್ ಬೇಡಿ ಅವರು ಇನ್ನು ಒಂದೇ ಹೆಜ್ಜೆ ಮುಂದೆ ಹೋಗಿ ರಸ್ತೆಗಳ ನಿರ್ವಹಣೆಗೆಂದು ಪ್ರತ್ಯೇಕ ವಿಭಾಗ ಸ್ಥಾಪಿಸಿ ಮಳೆಗಾಲದಲ್ಲಿ ರಸ್ತೆಗಳ ಪಕ್ಕದ ಚರಂಡಿಗಳನ್ನು ದುರಸ್ತಿ ಮಾಡಲೆಂದೆ ಕೆಲ ಜನರನ್ನು ನೇಮಿಸಿದ್ದರು.
೧೯೫೬ ರಿಂದ ೮೦ರ ವರೆಗೆ ಪಿಡಬ್ಲ್ಯೂಡಿ ಯುಗ ರಸ್ತೆಗಳು, ಮಾರುಕಟ್ಟೆಗಳು, ಸೇತುವೆಗಳು, ದೊಡ್ಡ ದೊಡ್ಡ ಸಂಕೀರ್ಣಗಳನ್ನು ನಿರ್ಮಿಸಲು ಈ ಇಲಾಖೆಗೆ ಅಧಿಕಾರ ಬಂತು. ಆಗ ರಸ್ತೆಗಳು ಮೊದಲ ಬಾರಿಗೆ ವಿಟಮಿನ್ ಮಿಶ್ರಿತ ಥಾರ್ ರಸ್ತೆಗಳನ್ನು ನಿರ್ಮಿಸಲು ಪ್ರಾರಂಭಿಸಿದರು.
ಆರಂಭದಲ್ಲಿ ಲ್ಯಾಟರೈಟ್ ಕಲ್ಲುಗಳನ್ನು ಬಳಸುತ್ತಿದ್ದರು. ಬರ ಬರುತ್ತಾ ಕಪ್ಪು ಕಲ್ಲುಗಳನ್ನು ಬಳಸಲು ಪ್ರಾರಂಭಿಸಿದರು. ಮಳೆಗಾಲಕ್ಕೆ ಮುನ್ನ ನೀರು ಹೊರೆ ಕಾಲುವೆಗಳನ್ನು ಸ್ವಚ್ಛಗೊಳಿಸುತ್ತಿದ್ದರು. ರಸ್ತೆಗಳು ಪೂರ್ತಿ ಸಮತಟ್ಟಾಗಿಲ್ಲದಿದ್ದರೂ ಮಳೆಗಾಲದಲ್ಲಿ ಯಾವುದೇ ರೀತಿಯ ಹಾನಿಯಾzರೂÄ ದುರಸ್ತಿ ಮಾಡಬಹುದಾಗಿತ್ತು.
೧೯೮೦ ರಿಂದ ಇಂದಿನವರೆಗೆ ಆಧುನಿಕ ಆಸ್ಪಾರ್ಟ್ ಪೆಟ್ರೋಲಿಯಂ ಆಧರಿತ ವಿಟಮಿನ್ ಮಿಶ್ರಣವನ್ನು ಕಲ್ಲಿನ ಮಿಶ್ರಣದೊಂದಿಗೆ ಬೆರೆಸಿ ರಸ್ತೆ ಮಾಡಲು ಪ್ರಾರಂಭಿಸಿದರು. ಈ ಮಿಶ್ರಣವು ಕಲ್ಲಿಗಿಂತ ಕಡಿಮೆ ರಂಧ್ರ ಹೊಂದಿರುವುದರಿAದ ಅದರ ಬಿರುಕುಗಳ ಮೂಲಕ ನೀರು ಪ್ರವೇಶಿಸುವುದು ಕಡಿಮೆ ಇರುತ್ತಿತ್ತು.
ಮಳೆಗಾಲದಲ್ಲಿ ರಸ್ತೆ ಹಾಳಾಗುವ ಸಾಧ್ಯತೆ ಕಡಿಮೆ ಇತ್ತು. ಆಧುನಿಕತೆ ಬೆಳೆದಂತೆ ವೇಗವಾಗಿ ಬೆಳೆದ ಜನಸಂಖ್ಯೆ, ಪಟ್ಟಣಗಳ ಬೆಳವಣಿಗೆ, ವ್ಯಾಪಾರ - ವಹಿವಾಟು, ರಸ್ತೆಗಳ ಉದ್ದ ಅಗಲವನ್ನು ಹೆಚ್ಚು ಮಾಡಿತು. ಎಲ್ಲಿಯವರೆಗೆ ಪಿಡಬ್ಲ್ಯೂಡಿ ಇಲಾಖೆಯೇ ಸಂಪೂರ್ಣ ಮೇಲ್ವಿಚಾರಣೆ ನಡೆಸುತಿತ್ತು. ಅಲ್ಲಿಯವರೆಗೆ ರಸ್ತೆಗಳ ಗುಣಮಟ್ಟ ಹೆಚ್ಚು ಹಾಳಾಗುತ್ತಿರಲಿಲ್ಲ. ರಸ್ತೆಗಳ ನಿರ್ವಹಣೆಗೆ ಒಬ್ಬ ಓವರ್ಸಿಯರ್ ಹಾಗೂ ಮೂರು ಜನ ಸಹಾಯಕರು ವರ್ಷವಿಡೀ ರಸ್ತೆಗಳ ಉದ್ದಗಲಕ್ಕೂ ಓಡಾಡುತ್ತಾ ರಸ್ತೆಯಲ್ಲಿ ಸಣ್ಣ ಸಣ್ಣ ಗುಂಡಿ ಬಿದ್ದರೂ ತಕ್ಷಣ ಅವುಗಳನ್ನು ಮುಚ್ಚುತ್ತಿದ್ದರು ಹಾಗೂ ರಸ್ತೆ ಬದಿಗಳನ್ನು ನೀರು ನಿಲ್ಲದಂತೆ ಹಾಗೂ ರಸ್ತೆಗೆ ನೀರು ನುಗ್ಗದಂತೆ ಎಚ್ಚರ ವಹಿಸುತ್ತಿದ್ದರು. ಯಾವಾಗ ಹೊರಗುತ್ತಿಗೆ ಯುಗ ಪ್ರಾರಂಭವಾಯಿತು ಅಲ್ಲಿಂದ ರಸ್ತೆಗಳ ಆಯಸ್ಸು ಕಡಿಮೆಯಾದವು. ರಸ್ತೆಗಳು ಬಡವಾದವು.... ಗುತ್ತಿಗೆದಾರ ಶ್ರೀಮಂತನಾದ... ಇತ್ತೀಚಿನ ವರ್ಷಗಳಲ್ಲಿ ರಸ್ತೆಗಳು ರಾಜಕೀಯ ಕೇಂದ್ರ ಬಿಂದು, ರಸ್ತೆಯೇ ಇಲ್ಲದವರಿಗೆ ರಸ್ತೆಯ ಆಸೆ, ಇದ್ದು ಇಲ್ಲದಂತವರಿಗೆ ಒಳ್ಳೆಯ ರಸ್ತೆ ಆಸೆ, ಒಳ್ಳೆಯ ರಸ್ತೆ ಇದ್ದವರಿಗೆ ಉತ್ತಮವಾದ ರಸ್ತೆ ಆಸೆ, ನಮ್ಮ ಆಸೆಗಳನ್ನು ಪೂರೈಸಿ ಜನನಾಯಕನಾಗುವ ಆಸೆ ರಾಜಕೀಯ ಧುರೀಣರಿಗೆ.... ನಮ್ಮ ಜಿಲ್ಲೆಯ ರಸ್ತೆ ಸಾಮಾನ್ಯವಾಗಿ ಎರಡು ಮೂರು ವರ್ಷ ಬಾಳಿಕೆ ಬಂದರೆ ಹೆಚ್ಚು. ಗುತ್ತಿಗೆದಾರನನ್ನು ಈ ಪ್ರಶ್ನೆ ಕೇಳಿದರೆ ನಮ್ಮ ಜಿಲ್ಲೆಯಲ್ಲಿ ಹೆಚ್ಚು. ಮಳೆ ರಸ್ತೆ ಅಕ್ಕಪಕ್ಕ ಮರಗಳು ಹೆಚ್ಚು ಮಳೆ ನೀರಿನಿಂದ ರಸ್ತೆ ಹಾಳಾಗುತ್ತದೆ ಎಂಬ ಉತ್ತರ.... ಏಳೆಂಟು ವರ್ಷಗಳ ಹಿಂದೆ ಉತ್ತಮ ರಸ್ತೆ ಮಾಡುತ್ತೇವೆ ಎಂದು ಕುಟ್ಟದಿಂದ ಮಡಿಕೇರಿಯವರೆಗೆ ರಸ್ತೆ ಅಕ್ಕಪಕ್ಕ ಇದ್ದ ನೂರಾರು ವರ್ಷ ಹಳೆಯ ಹಲಸಿನ ಮರಗಳನ್ನು ಕಡಿದು ಸಾಗಿಸಿದರು. ಆದರೆ ಯಾವುದೇ ರೀತಿಯ ರಸ್ತೆಗಳು ಮಾತ್ರ ನಿರ್ಮಾಣವಾಗಲಿಲ್ಲ... ನಮ್ಮ ಜಿಲ್ಲೆಯ ಎಷ್ಟೇ ಮಳೆ, ಗಾಳಿ ಹಾಗೂ ರಸ್ತೆ ಬದಿಯ ಮರಗಳಿರುವ ನಮ್ಮ ಪಕ್ಕದ ಕೇರಳ ರಾಜ್ಯದ ವೈನಾಡು ಜಿಲ್ಲೆಯ ರಸ್ತೆಗಳ ಗುಣಮಟ್ಟ ಬಹಳ ಚೆನ್ನಾಗಿದೆ. ಇಲ್ಲೂ ಕೂಡ ದೊಡ್ಡ ದೊಡ್ಡ ಹೊಂಡಗಳಿಲ್ಲ ಇದು ಹೇಗೆ ಸಾಧ್ಯ...? ನಾವು ರಸ್ತೆಗಳಿಗೆ ಹೊಂಡಗಳಾದಾಗ ಅಂತಹ ಹೊಂಡಗಳಲ್ಲಿ ಬಾಳೆಗಿಡ, ಭತ್ತದ ನಾಟಿ ಮಾಡಿ ರಿಲ್ಸ್ ಮಾಡುವ ಬದಲು ಹೊಸ ರಸ್ತೆ ನಿರ್ಮಾಣ ಮಾಡುವಾಗ ಆ ಗುತ್ತಿಗೆದಾರನ ಕೆಲಸ ಹಾಗೂ ಗುಣಮಟ್ಟದ ವೀಡಿಯೋಗಳನ್ನು ಮಾಡಿ ಸಮಾಜಕ್ಕೆ ತೋರಿಸುವುದು ಒಳ್ಳೆಯದು.. ನಮ್ಮಲ್ಲಿ ರಸ್ತೆಗಳು ಅರ್ಧಕರ್ಧ ಹಾಳಾಗುವುದೇ ರಸ್ತೆ ಮೇಲೆ ನೀರು ಹರಿಯುವುದರಿಂದ ಹಾಗೂ ರಸ್ತೆಗಳ ಪಕ್ಕದ ಕಾಲುವೆಗಳ ನಿರ್ಲಕ್ಷ ಇಳಿಜಾರು ಮತ್ತು ಭೂಕುಸಿತ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಹೆಚ್ಚು ಸರಕು ಹೊತ್ತ ಲಾರಿಗಳು ರಸ್ತೆಗಳನ್ನು ಹಾಳು ಮಾಡುತ್ತವೆ. ಇವುಗಳ ಜೊತೆಯಲ್ಲಿ ಗುತ್ತಿಗೆದಾರನ ತೆಳ್ಳನೆಯ ಆಸ್ಮಾರ್ಟ್ ಪದರುವಿಕೆ.... ಲಕ್ಷ ರೂಪಾಯಿ ಕೆಲಸಕ್ಕೆ ಶೇ. ೨೦ರಷ್ಟು ಮುಂಗಡಕೊಡಬೇಕು ಅದಾದ ನಂತರ ಬಿಲ್‌ಪಾಸ್ ಮಾಡಲು ಹಣ ಕೊಡಬೇಕು. ಕೆಲಸ ಮುಗಿಸಿ ಎರಡು ಮೂರು ತಿಂಗಳು ಹಣಕ್ಕಾಗಿ ಕಾಯಬೇಕು. ಇದರ ನಡುವೆ ನಮ್ಮ ಲಾಭವನ್ನು ಉಳಿಸಿಕೊಳ್ಳಬೇಕು. ಈ ಕೆಲಸವೇ ಬೇಡ ಎಂದು ಕೃಷಿ ಮಾಡುತ್ತಿದ್ದೇನೆ ಎಂದು ಹೆಸರು ಹೇಳಲು ಬಯಸದ ಒಬ್ಬ ಹಿರಿಯ ಪಿಡಬ್ಲ್ಯೂಡಿ ಗುತ್ತಿಗೆದಾರನ ಅಳಲು... ಹೊಸದಾಗಿ ನಿರ್ಮಿಸಿದ ರಸ್ತೆಗಳು ಮತ್ತು ಸೇತುವೆಗಳು ಕುಸಿದು ಬಿದ್ದರು ಸುಮಾರು ೫೦ ವರ್ಷ ಹಿಂದೆ ನಿರ್ಮಿಸಲಾದ ಪುಣೆಯ ಜಂಗ್ಲಿ ಮಹಾರಾಜ್ ಜೆಎಂ ರಸ್ತೆ ಒಂದು ವಿಶಿಷ್ಟ ನಾಗರಿಕ ಅದ್ಭುತವಾಗಿ ನಿಂತಿದೆ. ೧೯೭೬ರಲ್ಲಿ ನಿರ್ಮಿಸಲಾದ ಈ ರಸ್ತೆ ೨೦೧೪ರಲ್ಲಿ ನವೀಕರಣಗೊಳ್ಳುವವರೆಗೆ ಪ್ರಕೃತಿಯ ಎಲ್ಲಾ ಪರೀಕ್ಷೆಯನ್ನು ಎದುರಿಸಿ ಗಟ್ಟಿಮುಟ್ಟಾಗಿತ್ತು. ಈ ರಸ್ತೆಯನ್ನು ನಿರ್ಮಿಸಿದ ರೆಕಾರ್ಡು ಎಂಬ ಕಂಪೆನಿಯ ಇಬ್ಬರು ಪಾರ್ಸಿ ಸೋದರರಿಗೆ ಮತ್ತೆ ಯಾವುದೇ ರಸ್ತೆ ಗುತ್ತಿಗೆ ಕೆಲಸ ಸಿಗಲಿಲ್ಲ.... ನಮ್ಮಲ್ಲಿ ಎರಡು-ಮೂರು ವರ್ಷ ಮಾತ್ರ ಬಾಳಿಕೆ ಬರುವ ರಸ್ತೆಗಳನ್ನು ನಿರ್ಮಾಣ ಮಾಡಿದರೆ ಮಾತ್ರ ಮರುಗುತ್ತಿಗೆ ನೀಡುತ್ತಾರೆ.... ಆಗ ಸಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಮಳೆ ಬರುವ ಸಂದರ್ಭ ಹೆಚ್ಚು ಭಾರ ಹೊತ್ತ ಸರಕು ಲಾರಿಗಳನ್ನು ನಿರ್ಬಂಧ ಮಾಡಿದ್ದರೂ ಏನು ಪ್ರಯೋಜನವಿಲ್ಲ. ನಿರ್ಬಂಧಗಳು ಕೇವಲ ಕಡತಗಳಲ್ಲಿ ಮಾತ್ರ... ನಮ್ಮ ಜಿಲ್ಲೆಯಲ್ಲಿ ರಸ್ತೆಗಳು ಹೆಚ್ಚಿಗೆ ಬಾಳಿಕೆ ಬರಬೇಕೆಂದರೆ ಮಳೆಗಾಲಕ್ಕೆ ತಕ್ಕಂತೆ ರಸ್ತೆಗಳ ವಿನ್ಯಾಸವಾಗಬೇಕಿದೆ. ನಿರಂತರ ಚರಂಡಿ ಹಾಗೂ ಪಕ್ಕದ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕಾಗಿದೆ. ಕೊಡಗಿನ ರಸ್ತೆಗಳು ಒಂದು ಕಾಲದಲ್ಲಿ ಮಳೆಯೊಂದಿಗೆ ಹೊಂದಿಕೊAಡು ಬದುಕುತ್ತಿದ್ದವು. ಆದರೆ ಇಂದು ಮಳೆ ಎದುರು ಶೀಘ್ರವಾಗಿ ಸೊರಗಿ ಹೋಗುತ್ತಿವೆ.... ಉತ್ತಮವಾದ ರಸ್ತೆಗಳಿದ್ದರೆ ಕೊಡಗಿನ ಆರ್ಥಿಕತೆ, ಪ್ರವಾಸೋದ್ಯಮ ಹಾಗೂ ಇಲ್ಲಿಯ ಜನರ ದಿನನಿತ್ಯದ ಜೀವನ ಸುಗಮ. ನಾವು ಸರ್ಕಾರಕ್ಕೆ ಕಟ್ಟುವ ತೆರಿಗೆಗಳು ವಿನಾಕಾರಣ ಪೋಲಾಗದೆ ಸದ್ಬಳಕೆ ಆಗಬೇಕಿದೆ.
- ಮಚ್ಚಮಾಡ ಅನೀಶ್ ಮಾದಪ್ಪ, ಟಿ. ಶೆಟ್ಟಿಗೇರಿ.