ಕಣಿವೆ, ಸೆ. ೧೦: ಕಾಡಂಚಿನ ಗ್ರಾಮಗಳಲ್ಲಿ ಗೋವುಗಳನ್ನು ಸಾಕಿರುವ ಗೋಪಾಲಕರು ಗೋವುಗಳ ಕೊರಳಿಗೆ ಹಾಕುವ ಬಡಿಗೆಗಳಿಂದ ಗೋವುಗಳು ಸಾಕಷ್ಟು ನೋವು ಅನುಭವಿಸುತ್ತಿವೆ.
ತ್ರಿಭುಜ ಆಕೃತಿಯಲ್ಲಿ ಗೋವು ಗಳಿಗೆ ಅಳವಡಿಸುವ ಬಡಿಗೆಗಳು ಆ ಗೋವುಗಳು ಹುಲ್ಲನ್ನು ಅರಸಿ ಮೆಲ್ಲಲು ಅಡ್ಡಿಯಾಗುತ್ತಿದ್ದರೂ ಕೂಡ ಗೋಪಾಲಕರು ನಿರ್ಲಕ್ಷö್ಯ ವಹಿಸಿರುವುದು ಅಮಾಯಕ ಮುಗ್ಧ ಗೋವುಗಳಿಗೆ ನೀಡುತ್ತಿರುವ ಶಿಕ್ಷೆಯಾಗಿದೆ.
ಸೋಮವಾರಪೇಟೆ ತಾಲೂ ಕಿನ ಯಡವನಾಡು, ಕುಶಾಲನಗರ ತಾಲೂಕಿನ ಹೆರೂರು, ಹುದುಗೂರು, ನಾಕೂರು ಶಿರಂಗಾಲ ಮೊದಲಾದ ಗ್ರಾಮಗಳಲ್ಲಿನ ರೈತರು ತಾವು ಸಲಹಿರುವ ಆಕಳುಗಳಿಂದ ಅವುಗಳ ಎಳೆಯ ಪ್ರಾಯದ ಕರುಗಳಿಗೂ ನೀಡದಂತೆ ಹಾಲು ಹಿಂಡಿ ಕಾಡಿಗಟ್ಟುತ್ತಾರೆ. ಹೀಗೆ ಕಾಡಿಗಟ್ಟುವ ಸಂದರ್ಭ ಸಂಜೆ ಮನೆಗೆ ಮರಳುವ ಹಾಲು ಕೊಡುವ ತಾಯಿ ಹಸುವಿನಿಂದ ಕರು ಹಾಲು ಕುಡಿಯಬಾರದು ಹಾಗೂ ರೈತರು ಬೆಳೆದಿರುವ ಬೆಳೆ ತಿನ್ನಲು ಬೇಲಿ ದಾಟಬಾರದು ಎಂಬಿತ್ಯಾದಿ ಕಾರಣಗಳಿಂದ ಕೆಲವೊಂದು ಹಸು ಹಾಗೂ ಕರುಗಳ ಕೊರಳಿಗೆ ಈ ರೀತಿಯ ಬಡಿಗೆಗಳನ್ನು ಜೋತು ಹಾಕುತ್ತಾರೆ. ಆದರೆ ಈ ಹಸು ಕರುಗಳು ದಿನವಿಡೀ ಕೊರಳಲ್ಲಿ ಬಡಿಗೆಗಳನ್ನು ಹೊತ್ತು ತಿರುಗಲು ಸಾಕಷ್ಟು ತ್ರಾಸಪಡುತ್ತವೆ. ಮಾತು ಆಡುವ ಪಾಲಕರು ಮಾತು ಬಾರದ ಈ ಅಮಾಯಕ ಜೀವಗಳಿಗೆ ನೀಡುವ ಹಿಂಸೆಯ ವಿರುದ್ಧ ಗೋವುಗಳ ಪ್ರಿಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಪಾಲಕರಿಗೆ ಈ ಹಸು ಕರುಗಳು ಹಾಲನ್ನು ಹಿಂಡಲು ಬೇಕು. ಅದೇ ಅವುಗಳಿಗೆ ಹುಲ್ಲು ನೀರು ನೀಡುವುದು ಬೇಡವೇ...?
ಅವುಗಳ ಮನವನ್ನು ನೋಯಿಸಿ ತಮಗರಿವಿಲ್ಲದೆಯೇ ಅವುಗಳಿಗೆ ಹಿಂಸೆಯನ್ನು ನೀಡಿ ಅವುಗಳನ್ನು ಸಲಹುವುದು ಎಷ್ಟರ ಮಟ್ಟಿಗೆ ಸರಿ ಎಂದು ಗೋವುಗಳ ಪ್ರಿಯರು ಪ್ರಶ್ನಿಸುತ್ತಿದ್ದಾರೆ. ಯಡವನಾಡು ಬಳಿ ಇಂತಹ ಬಡಿಗೆಗಳನ್ನು ತೂಗು ಹಾಕಲಾಗಿದ್ದ ಹಸು ಹಾಗೂ ಕರುವೊಂದು ಹೆದ್ದಾರಿಯ ನಡುವೆ ಮಲಗಿ ಮೆಲುಕು ಹಾಕದಂತೆ ಕಟ್ಟಿರುವ ತ್ರಿಭುಜ ಆಕೃತಿಯ ಮರದ ಬಡಿಗೆಗಳನ್ನು ಹೊತ್ತು ಮಲಗಿದ್ದ ಚಿತ್ರಣ ‘ ಶಕ್ತಿ'ಗೆ ಗೋಚರಿಸಿತು. ಇನ್ನಾದರೂ ಪಾಲಕರು ಗೋವುಗಳಿಗೆ ನೀಡುವ ಈ ರೀತಿಯ ಹಿಂಸೆಗೆ ಕಡಿವಾಣ ಹಾಕಬೇಕಿದೆ. ಇಂತಹ ಮಾನವೀಯ ಕೆಲಸಕ್ಕೆ ಪಶು ಚಿಕಿತ್ಸಕರು ಗೋಪಾಲಕರಿಗೆ ಮಾಹಿತಿ ನೀಡುವ ಮೂಲಕ ಅವರ ಕಣ್ತೆರೆಸಿ ಅವುಗಳ ಹಿತ ಕಾಪಾಡಲು ಮುಂದಾಗಬೇಕಿದೆ. -ಕೆ.ಎಸ್ ಮೂರ್ತಿ