ಸಿದ್ದಾಪುರ, ಸೆ. ೧೦: ಕರಡಿಗೋಡು ಗ್ರಾಮದ ಚಂಗ್ಸ್ ಯುವಕ ಸಂಘದ ವತಿಯಿಂದ ಮೊದಲ ವರ್ಷದ ಓಣಂ ಪುಷ್ಪ ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಬಗೆಯ ಮನರಂಜನಾ ಕ್ರೀಡಾಕೂಟ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಕೃಷ್ಣ ಗ್ರಾಮದಲ್ಲಿ ಹೆಚ್ಚು, ಹೆಚ್ಚು ಕ್ರೀಡಾ ಚಟುವಟಿಕೆಗಳು ಆಯೋಜನೆಗೊಳ್ಳುತ್ತಿದ್ದರೆ ಅಂತ ಗ್ರಾಮದಲ್ಲಿ ಸ್ನೇಹ ಸೌಹಾರ್ದತೆ, ಐಕ್ಯತೆ ಗಟ್ಟಿಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಯುವಕರು ಹಮ್ಮಿಕೊಳ್ಳುವ ಕ್ರೀಡಾ ಚಟುವಟಿಕೆಗಳಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಮಾತನಾಡಿ, ಯುವಕರು ಹಬ್ಬದ ಪ್ರಯುಕ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಂಜಾಟದ ಬದುಕಿಗೆ ಮನರಂಜನೆ ನೀಡಿರುವುದು ನಿಜಕ್ಕೂ ಶ್ಲಾಘನೀಯ, ಪ್ರತಿಯೊಬ್ಬರು ಪಾಲ್ಗೊಂಡು ಯಶಸ್ಸಿಗೆ ಶ್ರಮಿಸಬೇಕು.

ಉದ್ಯಮಿ ಕುಕ್ಕುನೂರು ದೇವಿ ಪ್ರಕಾಶ್ ಮಾತನಾಡಿ, ಹಬ್ಬಗಳು ಕೇವಲ ಮನೆ ಹಾಗೂ ಕುಟುಂಬಕ್ಕೆ ಸೀಮಿತವಾಗದೆ ಗ್ರಾಮಸ್ಥರನ್ನು ಒಗ್ಗೂಡಿಸಿ ಆಚರಿಸಲು ಮುಂದಾದ ಯುವಕ ಪರಿಶ್ರಮ ಮಾದರಿಯಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು.

ಇದೇ ಸಂದರ್ಭ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಪುಟಾಣಿ ಮಕ್ಕಳಿಗೆ ಬಲೂನ್ ಒಡೆಯುವುದು, ಮಿಠಾಯಿ ಎಕ್ಕುವುದು, ಮಹಿಳೆಯರಿಗೆ, ಪುರುಷರಿಗೆ ಹಗ್ಗಜಗ್ಗಾಟ, ಬಾರದ ಗುಂಡು ಎಸೆಯುವುದು, ಸಂಗೀತ ಕುರ್ಚಿ, ಬಾಂಬ್ ಇನ್ ದಿ ಸಿಟಿ, ಮಡಿಕೆ ಒಡೆಯುವುದು ಸೇರಿದಂತೆ ಗ್ರಾಮೀಣ ಕ್ರೀಡಾಕೂಟ ಗಮನ ಸೆಳೆಯಿತು.

ಈ ಸಂದರ್ಭ ಚಂಗ್ಸ್ ತಂಡದ ಅಧ್ಯಕ್ಷ ಸುದೀಶ್, ಕಾರ್ಯದರ್ಶಿ ವಿಷ್ಣು ಚಾಮಿ, ಸದಸ್ಯರಾದ ಮಣಿಕಂಠ, ಸತ್ಯರಾಜ್, ರೋಹಿತ್, ಸತ್ಯವೇಲು, ಸನೋಜ್, ರಂಜಿತ್, ಅಭಿಷೇಕ್, ಶ್ರೀಜೇಶ್, ಸಂತೋಷ್, ರಕ್ಷಿತ್, ಸಂಜಯ್, ಸುಜೀತ್ ಮುಂತಾದವರು ಹಾಜರಿದ್ದರು. ಇದೇ ಸಂದರ್ಭ ನಡೆದ ಸಾಮೂಹಿಕ ಓಣಂ ಸದ್ಯದಲ್ಲಿ ಗ್ರಾಮಸ್ಥರು ಪಾಲ್ಗೊಂಡು ಹಬ್ಬದ ಊಟ ಸವಿದರು.