ಕುಶಾಲನಗರ, ಸೆ. ೧೦: ಕಾವೇರಿ ನದಿ ತೀರದ ಹೊಟೇಲ್, ಲಾಡ್ಜ್, ಹೋಂಸ್ಟೇ ಹಾಗೂ ರೆಸಾರ್ಟ್ಗಳಿಂದ ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ನದಿಗೆ ಬಿಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ರಸಲ್ಪುರ, ಚಿಕ್ಕಬೆಟಗೇರಿ ಹಾಗೂ ಬಸವನಹಳ್ಳಿ ಗ್ರಾಮದ ವಾಣಿಜ್ಯ ಉದ್ದಿಮೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಲಿನ ನೀರನ್ನು ನೇರವಾಗಿ ಚರಂಡಿಗಳ ಮೂಲಕ ನದಿಗಳಿಗೆ ಹರಿಸುತ್ತಿರುವ ಉದ್ದಿಮೆದಾರರಿಗೆ ಲೈಸೆನ್ಸ್ ಅನ್ನು ರದ್ದು ಪಡಿಸುವ ಎಚ್ಚರಿಕೆ ನೀಡಲಾಯಿತು. ೧೫ ದಿನಗಳ ಕಾಲಾವಕಾಶವನ್ನು ನೀಡಿದ್ದು ಈ ಅವಧಿಯಲ್ಲಿ ಎಸ್ಟಿಪಿ ನಿರ್ಮಾಣ ಮಾಡಿ ನೀರನ್ನು ಸಂಸ್ಕರಿಸಿ ಪುನರ್ಬಳಕೆ ಮಾಡುವ ಬಗ್ಗೆ ತಿಳಿ ಹೇಳಲಾಯಿತು.
ವಾಣಿಜ್ಯ ಸಂಸ್ಥೆಗಳು ನಾಮಫಲಕಗಳಲ್ಲಿ ಶೇ. ೬೦ ರಷ್ಟು ಕನ್ನಡ ಬಳಸುತ್ತಿರುವುದನ್ನು ಈ ಸಂದರ್ಭ ಖಾತ್ರಿಪಡಿಸಲಾಯಿತು. ಅಲ್ಲದೆ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೆ ಅನಧಿಕೃತವಾಗಿ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿರುವ ಉದ್ದಿಮೆದಾರರಿಗೆ ಹಾಗೂ ವಾರ್ಷಿಕ ತೆರಿಗೆ ಪಾವತಿಸದಿರುವ ವರ್ತಕರಿಗೆ ನೋಟಿಸ್ ಜಾರಿ ಮಾಡಲಾಯಿತು. ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಎಂ.ಆರ್., ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಪ್ರವೀಣ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಪ್ಪ, ಪ್ರದೀಪ್, ಉಮಾ, ಚಿದಾನಂದ, ಸುಶೀಲ, ಯಶೋಧ, ಸರ್ವಮಂಗಳ, ನಿತ್ಯಾನಂದ, ಗಂಗಮ್ಮ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರಸ್ವಾಮಿ ಕರವಸೂಲಿಗಾರ ಸಮಂತ್ ಹಾಗೂ ಸಿಬ್ಬಂದಿ ಹಾಜರಿದ್ದರು.