ಸುAಟಿಕೊಪ್ಪ, ಸೆ. ೧೦: ಶ್ರೀ ನಾರಾಯಣ ಗುರುಗಳ ೧೭೧ನೇ ಜಯಂತಿ ಯನ್ನು ೭ನೇ ಹೊಸಕೋಟೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಯಿತು.
೭ನೇ ಹೊಸಕೋಟೆಯ ಬ್ರಹ್ಮಶ್ರೀ ನಾರಾಯಣ ಗುರು ಚಾರಿಟೆಬಲ್ ಟ್ರಸ್ಟ್ ಆವರಣದಲ್ಲಿ ಟ್ರಸ್ಟ್, ಎಸ್ಎನ್ಡಿಪಿ ಶಾಖೆಯ ಅಧ್ಯಕ್ಷರು ಹಾಗೂ ಸದಸ್ಯರು ವನಿತಾ ಸಮಿತಿ ಮತ್ತು ಯೂತ್ ಕಮಿಟಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸೌಮ್ಯ ಪೂಕಳಂ ಸ್ಪರ್ಧೆಯನ್ನು ಉದ್ಘಾಟಿಸಿದರು.
೭ನೇ ಹೊಸಕೋಟೆಯ ಎಸ್.ಎನ್.ಡಿಪಿ. ಶಾಖಾ ಅಧ್ಯಕ್ಷ ಸಿ.ಬಿ. ರಾಜೇಶ್ ಧ್ವಜಾರೋಹಣ ನೆರವೇರಿಸಿದರು. ಗುರುಪೂಜೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಟಿ.ಕೆ. ಸಾಯಿಕುಮಾರ್ ನೆರವೇರಿಸಿದರು.
ಶ್ರೀ ನಾರಾಯಣ ಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ. ಮಂಜು ಉದ್ಘಾಟಿಸಿದರು. ನಂತರ ನಾರಾಯಣ ಗುರುಗಳ ಭಾವಚಿತ್ರದೊಂದಿಗೆ ಭವ್ಯ ಮಂಟಪದಲ್ಲಿ ಇರಿಸಿ ಕೇರಳದ ಚಂಡೆ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಜಯಂತಿ ಆಚರಣೆ ಹಿನ್ನೆಲೆ ಪೂಕಳಂ, ಸ್ಪರ್ಧೆ, ಭಜನಾ ಕಾರ್ಯಕ್ರಮ, ಹಾಡುಗಾರಿಕೆ, ನೃತ್ಯ ಕಾರ್ಯಗಳು ನಡೆದವು.