ಕಣಿವೆ, ಸೆ. ೧೦: ಸರಕಾರಿ ಕಚೇರಿಯಲ್ಲಿ ಹೆಚ್ಚುತ್ತಿರುವ ಮಧ್ಯವರ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ದಿನಕರಶೆಟ್ಟಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಾರ್ವಜನಿಕ ದೂರು ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ಸಿಬ್ಬಂದಿಗಳು ಹಾಗೂ ಕೆಲವು ಅಧಿಕಾರಿಗಳ ಕುಮ್ಮಕ್ಕಿನಿಂದ ಮಧ್ಯವರ್ತಿಗಳ ಹಾವಳಿ ಮಿತಿಮೀರಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜನರ ಕಡತಗಳು ಸಕಾಲದಲ್ಲಿ ವಿಲೇವಾರಿಯಾಗಬೇಕು. ಸರ್ಕಾರಿ ವಾಹನಗಳನ್ನು ಸ್ವಂತ ಕೆಲಸಗಳಿಗೆ ಬಳಸಬಾರದು. ಹಾಗೆಯೇ ಸಾರ್ವಜನಿಕರು ಕೂಡ ತಮ್ಮ ನಿಯಮಬಾಹಿರವಾದ ಕೆಲಸಗಳನ್ನು ಮಾಡಿಸಿಕೊಳ್ಳಲು ಅಧಿಕಾರಿಗಳು ಅಥವಾ ಸಿಬ್ಬಂದಿಗಳಿಗೆ ಹಣದ ಆಮಿಷ ಒಡ್ಡಿದರೆ ಅವರ ವಿರುದ್ಧವೂ ದೂರು ದಾಖಲಿಸಬಹುದು ಎಂದು ಲೋಕಾಯುಕ್ತ ಅಧಿಕಾರಿ ಹೇಳಿದರು. ಮಡಿಕೇರಿ ಕುಶಾಲನಗರ ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ ಗಳ ಚಾಲನೆ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ವೀಣಾ ನಾಯ್ಕ್ ನಿರ್ದೇಶಿಸಿದರು. ಸಾರ್ವಜನಿಕರಿಂದ ದೂರುಗಳು ಅಥವಾ ಸೌಲಭ್ಯಗಳ ಸಂಬAಧ ಮನವಿ ಸ್ವೀಕರಿಸಿದ ೧೦ ದಿನದೊಳಗೆ ವಿಲೇವಾರಿ ಮಾಡುವಂತೆ ಇನ್ಸ್ಪೆಕ್ಟರ್ ಲೋಕೇಶ್ ಕುಮಾರ್ ಹೇಳಿದರು. ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಅಧಿಕಾರಿ ಸಂತೋಷ್ ಇದ್ದರು.