ಶನಿವಾರಸಂತೆ, ಸೆ. ೧೦: ತಾ. ೨೨ ರಂದು ಜಿಲ್ಲೆಗೆ ಬಸವ ಸಂಸ್ಕೃತಿ ಅಭಿಯಾನ ಯಾತ್ರೆ ಆಗಮಿಸಲಿದ್ದು, ಅದ್ದೂರಿಯಾಗಿ ಸ್ವಾಗತಿಸಲು ಶನಿವಾರಸಂತೆ ಸಮೀಪದ ತಪೋವನ ಕ್ಷೇತ್ರ ಮನೆಹಳ್ಳಿಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ ಹಾಗೂ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಾಂಬಶಿವ ಮೂರ್ತಿ ಮಾತನಾಡಿ, ತಾ. ೩ ರಿಂದ ಬಸವೇಶ್ವರರ ಕಲ್ಯಾಣದ ನಾಡು ಬೀದರ್‌ನಿಂದ ಆರಂಭವಾದ ಅಭಿಯಾನ ರಾಜ್ಯದ ೩೧ ಜಿಲ್ಲೆಗಳಲ್ಲಿ ಸಂಚರಿಸುತ್ತದೆ. ತಾ. ೨೧ ರಂದು ಹಾಸನ ಜಿಲ್ಲೆಗೆ ಬಂದು ೨೨ ರಂದು ಕೊಡ್ಲಿಪೇಟೆಗೆ ಆಗಮಿಸಲಿದೆ. ಅಂದು ಕೊಡಗು ಜಿಲ್ಲೆಯ ಎಲ್ಲಾ ಬಸವಪರ ಚಿಂತನೆಗಳ ಒಕ್ಕೂಟಗಳು, ಸಂಘ ಸಂಸ್ಥೆಗಳು, ಅಖಿಲ ಭಾರತ ವೀರಶೈವ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು ಸೇರಿದಂತೆ ಎಲ್ಲಾ ಸಮುದಾಯದವರು ಬಸವ ಸಂಸ್ಕೃತಿ ಅಭಿಯಾನವನ್ನು ಕೊಡ್ಲಿಪೇಟೆಯ ಬಸವೇಶ್ವರ ದೇವಾಲಯ ಬಳಿ ಸ್ವಾಗತಿಸಿಕೊಂಡು ಮೆರವಣಿಗೆ ಮೂಲಕ ಕಿರಿಕೊಡ್ಲಿ ಮಠದ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯುವ ಧಾರ್ಮಿಕ ಸಭಾ ವೇದಿಕೆಗೆ ಆಗಮಿಸಲಿದೆ ಎಂದು ಹೇಳಿದರು.

ಧಾರ್ಮಿಕ ಸಭೆಯಲ್ಲಿ ಉತ್ತರ ಕರ್ನಾಟಕದ ಪೀಠಾಧಿಪತಿಗಳು ಹಾಗೂ ಕೊಡಗು ಜಿಲ್ಲೆಯ ಎಲ್ಲಾ ಮಠಾಧಿಪತಿಗಳು ಭಾಗವಹಿಸಲಿದ್ದಾರೆ. ಬಸವಪರವಾದ ಶ್ರೇಷ್ಠ ಚಿಂತನೆಗಳನ್ನು ಹೊಂದಿರುವ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಅಶೋಕ್ ಸಂಗಪ್ಪ ಆಲೂರು, ರಾಜ್ಯ ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ಮೊದಲಾದ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ವೀರಾಜಪೇಟೆ ತಾಲೂಕಿನ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಸರ್ಕಾರ ೧೨ ನೇ ಶತಮಾನದ ಕ್ರಾಂತಿಕಾರಿ ಪುರುಷ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿರುವುದರಿಂದ ಬಸವಣ್ಣನವರ ವಿಚಾರಧಾರೆಗಳು ಜನ ಸಮುದಾಯಕ್ಕೆ ತಲುಪಬೇಕು. ಬಸವಣ್ಣ ಕೇವಲ ಸಮುದಾಯ ಒಂದರ ನಾಯಕರಲ್ಲ. ಮಾನವ ಕುಲದ ನಾಯಕ ಎಂದರು.

ಸಭೆಯಲ್ಲಿ ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ, ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ನಟರಾಜ್, ಕೋಶಾಧಿಕಾರಿ ಕೆ.ಪಿ. ಪರಮೇಶ್, ತಪೋವನ ಕ್ಷೇತ್ರ ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ, ಮುದ್ದಿನಕಟ್ಟೆ ಮಠಾಧೀಶ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲಳ್ಳಿ ಮಠಾಧೀಶ ಮಹಾಂತ ಸ್ವಾಮೀಜಿ, ತೊರೆನೂರು ವಿರಕ್ತ ಮಠಾಧೀಶ ಮಲ್ಲೇಶ ಸ್ವಾಮೀಜಿ, ಸಿಡಿಗಳಲೆ ಮಠಾಧೀಶ ಇಮ್ಮಡಿ ಶಿವಲಿಂಗ ಸ್ವಾಮೀಜಿ, ವೀರಶೈವ ಮಹಾಸಭಾದ ಪದಾಧಿಕಾರಿಗಳಾದ ನಿಲುವಾಗಿಲು ಮದನ್, ಚಂದ್ರಶೇಖರ್, ಯಶೋಧಮ್ಮ, ಗಣಗೂರು ಚಂದ್ರಶೇಖರ್, ಮರೂರು ಎಚ್.ಎಸ್.ನಾಗರಾಜ್, ಹೆಬ್ಬಾಲೆ ಬಸವಣ್ಣ, ಕುಮಾರ್ ಹಾಜರಿದ್ದರು.