ಕೂಡಿಗೆ, ಸೆ.೧೦: ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಮತ್ತು ಶಿಕ್ಷಕರ ಕಲ್ಯಾಣ ನಿಧಿಯ ಸಂಯುಕ್ತಾಶ್ರಯದಲ್ಲಿ ಕೂಡಿಗೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಳಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್ ಸಂಸ್ಥೆ)ಯ ಮೈದಾನದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ತಾಲೂಕು ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಶಿಕ್ಷಕರು ಶಾಲೆಯಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪೋತ್ಸಾಹಿಸುವುದಲ್ಲಿ ಹೆಚ್ಚಿನ ಗಮನ ಹರಿಸುವುದರಿಂದ ಬಹುತೇಕ ಸಂದರ್ಭಗಳಲ್ಲಿ ತಮ್ಮ ಆಸಕ್ತಿಯ ಕ್ರೀಡೆ, ಹವ್ಯಾಸಗಳನ್ನು ಮರೆತು ಬಿಟ್ಟಿರುತ್ತಾರೆ. ಹೀಗಾಗಿ ಇಂತಹ ಕ್ರೀಡಾಕೂಟಗಳು ವೃತ್ತಿ ಜೀವನದಲ್ಲಿ ಚಿರಸ್ಮರಣಿಯವಾಗಿ ಉಳಿಯುತ್ತವೆ ಎಂದು ಶಿಕ್ಷಣಾಧಿಕಾರಿ ಕೃಷ್ಣಪ್ಪ ಅಭಿಪ್ರಾಯಪಟ್ಟರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್ ಚೇತನ್ ಮಾತನಾಡಿ, ಇಂತಹ ಸ್ಪರ್ಧೆಗಳು ಶಿಕ್ಷಕರ ದಿನನಿತ್ಯದ ಚಟುವಟಿಕೆಗಳಿಗೆ ಹೆಚ್ಚಿನ ಉತ್ಸಾಹ ಹಾಗೂ ಪ್ರೇರಣೆ ನೀಡುತ್ತವೆ ಎಂದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಎಸ್.ಎ.ಯೋಗೇಶ್, ಎಚ್.ಎನ್.ಮಂಜುನಾಥ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್..ಪ್ರಸನ್ನಕುಮಾರ್, ಜಿಲ್ಲಾ ಪ್ರೌಢಶಾಲಾ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಂ.ಎಸ್.ಮಹೇAದ್ರ, ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಎಸ್.ನಾಗರಾಜ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್, ನಿರ್ದೇಶಕ ಯಶವಂತ್, ಕ್ಷೇತ್ರ ಸಮನ್ವಯಾಧಿಕಾರಿ ಎಂ.ವಿ.ಮAಜೇಶ್, ತಾಲ್ಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಜಿ.ಎಂ.ಹೇಮAತ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಸುಕುಮಾರಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ.ಬಸವರಾಜ್, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರತ್ನಕುಮಾರ್, ಕಾರ್ಯದರ್ಶಿ ಟಿ.ವಿ.ಶೈಲಾ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್, ವಿವಿಧ ಸಂಘಟನೆಗಳ ಪ್ರಮುಖರಾದ ಸೋಮಯ್ಯ, ಎಚ್.ಪಿ.ಕರುಂಬಯ್ಯ, ದಿನೇಶ್, ಜಿ.ಪಿ.ಕವಿತ, ಸುಜಾತ, ಸುರೇಶ್, ಗಾಯತ್ರಿ ಹಾಗೂ ಇತರರು ಹಾಜರಿದ್ದರು.

ಕ್ರೀಡಾಕೂಟದಲ್ಲಿ ವಾಲಿಬಾಲ್, ಕ್ರಿಕೆಟ್, ಥ್ರೋಬಾಲ್ ಮುಂತಾದ ಪಂದ್ಯಗಳು, ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು, ಜಾನಪದ ನೃತ್ಯ, ರಸಪ್ರಶ್ನೆ , ಪ್ರಬಂಧ ರಚನೆ ಸ್ಪರ್ಧೆಗಳು ನಡೆದವು.

ಶಿಕ್ಷಕರು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿವಿಧ ಕಲೆಗಳನ್ನು ಅನಾವರಣಗೊಳಿಸಿದರು. ಶಿಕ್ಷಕಿಯರು ಹಾಡುಗಾರಿಕೆ, ಜಾನಪದ ನೃತ್ಯ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಕ್ರೀಡಾಕೂಟದ ಅಂಗವಾಗಿ ಪುರುಷ ಶಿಕ್ಷಕರಿಗೆ ವಾಲಿಬಾಲ್, ಕಬಡ್ಡಿ, ಕ್ರಿಕೆಟ್ ಟೂರ್ನಿಗಳು, ಮಹಿಳಾ ಶಿಕ್ಷಕರಿಗೆ ಥ್ರೋಬಾಲ್ ಮತ್ತಿತರ ಕ್ರೀಡೆಗಳು ಆಯೋಜನೆಗೊಂಡಿದ್ದವು.

ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಿಕ್ಷಕರಿಗೆ ಮಧ್ಯಾಹ್ನ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಾಲೂಕಿನ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರು ಹಾಗೂ ಶಿಕ್ಷಕಿಯರು ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತಸಪಟ್ಟರು.