ಮಡಿಕೇರಿ, ಸೆ. ೧೦: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಈಶ ಗ್ರಾಮೋತ್ಸವ ಕ್ರೀಡಾಕೂಟದ ಕರ್ನಾಟಕ ವಿಭಾಗೀಯ ಮಟ್ಟದ ಫೈನಲ್ಸ್ನಲ್ಲಿ ಮಹಿಳೆಯರ ಥ್ರೋಬಾಲ್‌ನಲ್ಲಿ, ಕೊಡಗಿನ ಮರಗೋಡು ಗ್ರಾಮದ ಬ್ಲ್ಯಾಕ್ ಪ್ಯಾಂಥರ್ಸ್ ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು ಗ್ರಾಮದ ಶಾಸ್ತರ ಪಡುಮಲೆ (ಕುಡ್ಲ ಸ್ಟೆçöÊಕರ್ಸ್) ತಂಡವನ್ನು ಸೋಲಿಸಿ ವಿಭಾಗೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಿಜೇತರಿಗೆ ರೂ. ೧೨,೦೦೦ ನಗದು ಬಹುಮಾನ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಸದ್ಗುರು ಅವರು, ಗ್ರಾಮಗಳಲ್ಲಿ ಕ್ರೀಡೆಯನ್ನು ಮರಳಿ ತರುವ ಮೂಲಕ ಗ್ರಾಮಸ್ಥರನ್ನು ಕ್ರೀಡಾ ಮನೋಭಾವವುಳ್ಳವರನ್ನಾಗಿಸಲು, ಅವರ ಜೀವನದ ಹೊರೆಯನ್ನು ನಿರಾಳವಾಗಿಸಲು ಈ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು. ಈಶ ಗ್ರಾಮೋತ್ಸವದ ೧೭ನೇ ಆವೃತ್ತಿ ಇದಾಗಿದ್ದು, ಆಟಗಾರರು ಕ್ಲಸ್ಟರ್, ವಿಭಾಗೀಯ ಹಂತಗಳಲ್ಲಿ ಸ್ಪರ್ಧಿಸಿದ ನಂತರ ಸೆಪ್ಟೆಂಬರ್ ೨೧ ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದ ಆದಿಯೋಗಿಯಲ್ಲಿ ನಡೆಯಲಿರುವ ಅಂತಿಮ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಪರ್ಧೆಯಲ್ಲಿ ಒಟ್ಟು ೧೪ ಮಹಿಳೆಯರ ಥ್ರೋಬಾಲ್ ತಂಡಗಳು ಭಾಗವಹಿಸಿದ್ದವು. ಈ ವರ್ಷ ಕರ್ನಾಟಕದ ೧೮ ಜಿಲ್ಲೆಗಳಿಂದ ೭,೨೦೦ ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಕ್ಲಸ್ಟರ್ ಮಟ್ಟದಲ್ಲಿ ಸ್ಪರ್ಧಿಸಿ ವಿಭಾಗೀಯ ಮಟ್ಟವನ್ನು ಪ್ರವೇಶಿಸಿದ ದಾಖಲೆಯ ಭಾಗವಹಿಸುವಿಕೆಗೆ ಸಾಕ್ಷಿಯಾದರು.

ಮಾಜಿ ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮತ್ತು ದಕ್ಷಿಣ ಭಾರತದ ಸ್ಟಾರ್ ನಟಿ ಶ್ರೀನಿಧಿ ಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು.