ಗೋಣಿಕೊಪ್ಪಲು. ಸೆ. ೧೦: ಬಾಳೆಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೬೨ ಲಕ್ಷ ಲಾಭಾಂಶದಲ್ಲಿ ಉತ್ತಮವಾಗಿ ನಡೆಯುತ್ತಿದ್ದು, ಪ್ರಸ್ತುತ ಸಂಘದ ಸದಸ್ಯರಿಗೆ ಶೇ.೨೩ ಡಿವಿಡೆಂಡ್ ನೀಡಲು ನಿರ್ಧಾರ ಕೈಗೊಂಡಿತು. ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಬಹುಮಾನಗಳನ್ನು ಆಡಳಿತ ಮಂಡಳಿ ವತಿಯಿಂದ ನೀಡಲಾಯಿತು. ಸಂಘವೂ ವರ್ಷದಿಂದ ವರ್ಷಕ್ಕೆ ಲಾಭಾಂಶದಲ್ಲಿ ಮುಂದುವರೆಯುತ್ತಿದೆ. ಇದಕ್ಕೆ ಸರ್ವ ಸದಸ್ಯರ ಸಹಕಾರವೇ ಪ್ರಮುಖ ಕಾರಣ. ಸದಸ್ಯರುಗಳು ಸಂಘದಲ್ಲಿಯೇ ದೈನಂದಿನ ವ್ಯವಹಾರ ವಹಿವಾಟುಗಳನ್ನು ನಡೆಸುವ ಮೂಲಕ ಸಂಘದ ಪ್ರಗತಿಗೆ ಸಹಕಾರಿಯಾಗುವಂತೆ ಸಂಘದ ಅಧ್ಯಕ್ಷರಾದ ಚಿಮ್ಮಣಮಾಡ ಎಸ್. ಕೃಷ್ಣ ಗಣಪತಿ ಸದಸ್ಯರಲ್ಲಿ ಮನವಿ ಮಾಡಿದರು.

ಬಾಳೆಲೆಯ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ೬೩ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್. ಗಣಪತಿ ಸಂಘದಲ್ಲಿ ಗ್ರಾಮೀಣ ಭಾಗದ ೧೭೩೬ ಸದಸ್ಯರಿದ್ದು, ಸದಸ್ಯರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರಗಳನ್ನು ವಿತರಿಸಿದ್ದೇವೆ. ಸಂಘದ ಸದಸ್ಯರ ಹಿತ ಕಾಪಾಡುವುದು ಸಂಘದ ಮೂಲ ಉದ್ದೇಶವಾಗಿದೆ.

ಸದಸ್ಯರ ಅನುಕೂಲಕ್ಕಾಗಿ ಮದುವೆ ಸಾಲವನ್ನು ಸಂಘದ ವತಿಯಿಂದ ಮಂಜೂರು ಮಾಡಲಾಗಿದ್ದು ಇದರ ಪ್ರಯೋಜನವನ್ನು ಸದಸ್ಯರು ಹೊಂದಿಕೊಳ್ಳಬಹುದಾಗಿದೆ. ಇದರಿಂದ ಮದುವೆ ಮಾಡುವ ಕುಟುಂಬದ ಸದಸ್ಯರಿಗೆ ಅನುಕೂಲವಾಗಲಿದೆ. ಪ್ರಸ್ತುತ ಪಡೆದ ಸಾಲವನ್ನು ಒಂದು ವರ್ಷದ ಅವಧಿಯಲ್ಲಿ ಮರು ಪಾವತಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಈ ವೇಳೆ ಸಂಘದ ಕೆಲ ಸದಸ್ಯರು ಉತ್ತಮ ಕಾರ್ಯಕ್ಕೆ ಆಡಳಿತ ಮಂಡಳಿಯನ್ನು ಪ್ರಶಂಸಿಸಿದರು. ಅಲ್ಲದೆ ಪಡೆದ ಸಾಲದ ಮರುಪಾವತಿಗೆ ಹೆಚ್ಚಿನ ಸಮಯವನ್ನು ನಿಗದಿಪಡಿಸುವಂತೆ ಸಲಹೆ ನೀಡಿದರು.

ಪಡೆದ ಸಾಲವನ್ನು ಒಂದು ವರ್ಷದ ಅವಧಿಯಲ್ಲಿ ಮರು ಪಾವತಿ ಮಾಡುವುದು ಕಷ್ಟವಾಗಲಿದೆ. ಆದರಿಂದ ಕನಿಷ್ಟ ೩ ವರ್ಷವಾದರೂ ಸಮಯ ನೀಡಬೇಕು ಎಂದು ಸಭೆಯಲ್ಲಿ ವಿಷಯ ಮಂಡಿಸಿದರು. ಸದಸ್ಯರ ಮಾತಿಗೆ ಒಪ್ಪಿಗೆ ಸೂಚಿಸಿದ ಅಧ್ಯಕ್ಷರು ಮದುವೆ ಸಾಲವನ್ನು ಹಿಂದುರುಗಿಸಲು ೩ ವರ್ಷದ ಅವಧಿಯನ್ನು

ನೀಡುವುದಾಗಿ ಅಲ್ಲದೆ ಸಾಲ ಪಡೆಯುವ ಸದಸ್ಯರ ವಿವರವನ್ನು ಗೌಪ್ಯವಾಗಿಡಲಾಗುವುದು ಇದರಲ್ಲಿ ಯಾವುದೇ ಅಂಜಿಕೆ ಬೇಡ ಎಂದು ತಿಳಿಸಿದರು.

ಸದಸ್ಯರ ಸದಸ್ಯತ್ವವನ್ನು ಒಂದು ಸಾವಿರದಿಂದ ಎರಡು ಸಾವಿರಕ್ಕೆ ಹೆಚ್ಚಿಸಲು ಅಧ್ಯಕ್ಷರು ಸಭೆಯಲ್ಲಿ ಪ್ರಸ್ತಾಪ ಮಂಡಿಸಿದರು. ಹಲವಾರು ವರ್ಷಗಳಿಂದ ಸದಸ್ಯರ ಷೇರು ಬಂಡವಾಳ ಕೇವಲ ಒಂದು ಸಾವಿರ ಇರುವುದರಿಂದ ಇದನ್ನು ೨ ಸಾವಿರಕ್ಕೆ ಹೆಚ್ಚಿಸಲು ಮಹಾಸಭೆಯು ಅನುಮತಿಯನ್ನು ನೀಡಿತು. ಸದಸ್ಯರಿಗೆ ಸಿಗುವ ಡಿವಿಡೆಂಡ್‌ನ್ನು ಮಹಾಸಭೆಯ ನಂತರ ಅತ್ಯಂತ ಶೀಘ್ರದಲ್ಲಿ ಸದಸ್ಯರಿಗೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸದಸ್ಯರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಆದಷ್ಟು ಬೇಗನೆ ಸದಸ್ಯರ ಖಾತೆಗಳಿಗೆ ಡಿವಿಡೆಂಟನ್ನು ಜಮಾ ಮಾಡುವ ಭರವಸೆ ನೀಡಿದರು. ಈಗಾಗಲೇ ಪೊನ್ನಪ್ಪಸಂತೆಯಲ್ಲಿ ಪ್ರಾರಂಭಿಸಲಾಗಿರುವ ಶಾಖೆಯು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಅಧ್ಯಕ್ಷರು ಸಮಜಾಯಿಸಿಕೆ ನೀಡಿದರು.

ಸಂಘದ ಸದಸ್ಯರಿಗೆ ರಸಗೊಬ್ಬರ ವಿತರಣೆ ಹಾಗೂ ಸಂಘದ ಆರ್ಥಿಕ ಚಟುವಟಿಕೆಯನ್ನು ಸ್ಥಳೀಯ ಮಟ್ಟದಲ್ಲಿಯೇ ಸಿಗುವಂತೆ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಸಂಘದ ಸದಸ್ಯರ ಪೂರ್ಣ ಸಹಕಾರ ಲಭಿಸುತ್ತಿರುವುದು ಶ್ಲಾಘನೀಯ. ಸಂಘವು ಲಾಭಾಂಶದಲ್ಲಿ ಮುಂದುವರೆಯುತ್ತಿರುವುದರಿAದ ಸದಸ್ಯರಿಗೆ ಪ್ರಸ್ತುತ ಸಾಲಿನಲ್ಲಿ ಶೇ.೨೩ ಡಿವಿಡೆಂಡ್ ನೀಡಲು ಮಹಾಸಭೆ ಒಪ್ಪಿಗೆ ನೀಡಿರುವುದರಿಂದ ಡಿವಿಡೆಂಡ್ ನೀಡಲಾಗುತ್ತಿದೆ ಸಂಘದಲ್ಲಿ ಸದಸ್ಯರು ಹೆಚ್ಚಿನ ವಹಿವಾಟು ನಡೆಸುವಂತಾದಲ್ಲಿ ಮತ್ತಷ್ಟು ಲಾಭಾಂಶವನ್ನು ಪಡೆಯಲು ಸಹಾಯವಾಗಲಿದೆ. ಇದರಿಂದ ಸಂಘವು ಇನ್ನಷ್ಟು ಪ್ರಗತಿ ಸಾಧಿಸಲು ಅನುಕೂಲವಾಗಲಿದೆ

ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರಸ್ತುತ ಸಾಲಿನಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನವನ್ನು ನೀಡಲಾಗುತ್ತಿದೆ. ರೈತರಿಗೆ ಅನುಕೂಲಕರವಾದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಸಂಘದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಪ್ರಸ್ತುತ ಸಂಘವು ೬೧,೮೯,೭೫೧ .೭೫ ಲಕ್ಷ ಲಾಭ ಗಳಿಸಿದೆ. ರೈತರಿಗೆ ಇನ್ನಷ್ಟು ಪ್ರಯೋಜನಕಾರಿ ಕೆಲಸ ಮಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಸಂಘದ ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದರು.

ವರದಿ ಸಾಲಿನಲ್ಲಿ ೧೭೬೩ ಸದಸ್ಯರಿದ್ದು ಕೆಸಿಸಿ ಸಾಲವು ಶೇ.೧೦೦ರಷ್ಟು ವಸೂಲಾತಿಯಾಗಿರುತ್ತದೆ. ಪಾಲು ಹಣ ೨೦೯.೫೩ ಲಕ್ಷವಿದ್ದು ವರದಿ ಸಾಲಿನಲ್ಲಿ ರೂ.೨೫.೮೨ ಲಕ್ಷ ಹೆಚ್ಚಾಗಿರುತ್ತದೆ. ಸದಸ್ಯರಿಗೆ ಅಗತ್ಯ ದಾಖಲಾತಿಗಳನ್ನು ಪಡೆದು ೫ ಲಕ್ಷದವರೆಗೆ ಕೃಷಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಸದಸ್ಯರಿಗೆ ವಿತರಿಸಿದ್ದೇವೆ. ೧೫ ಲಕ್ಷವರೆಗೆ ಮಧ್ಯಂತರ ಸಾಲವನ್ನು ಶೇ.೩ರ ಬಡ್ಡಿ ದರದಲ್ಲಿ ಹಾಗೂ ಉಳಿದ ಸಾಲವನ್ನು ಸಾಮಾನ್ಯ ಬಡ್ಡಿ ದರದಲ್ಲಿ ವಿತರಿಸಲಾಗಿದೆ ಎಂದರು.

ಸಂಘದ ಸದಸ್ಯರು ಸಂಘದಲ್ಲಿ ಕನಿಷ್ಟ ವ್ಯವಹಾರಗಳನ್ನು ಮಾಡುವ ಮೂಲಕ ಮಹಾಸಭೆಯಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಕಾಯ್ದುಕೊಳ್ಳಬೇಕು ಎಂದರು. ಸಂಘದ ಸದಸ್ಯರು ಕೇಳಿದ ಹಲವು ಪ್ರಶ್ನೆಗಳಿಗೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕೆ.ಎ.ಸೀತಮ್ಮ ಉತ್ತರಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷÀ ಮಾಚಂಗಡ ಆರ್.ಗಾಯತ್ರಿ, ನಿರ್ದೇಶಕರಾದ ಆದೇಂಗಡ ಕೆ. ಚಂದ್ರಶೇಖರ್, ಪೋಡಮಾಡ ಜ್ಯೋತಿ ನಾಚಪ್ಪ, ಕಾಂಡೇರ ಎಂ.ತೇಜ, ಮಾಚಂಗಡ ಎಂ.ಮುತ್ತಣ್ಣ, ಕಳ್ಳಿಚಂಡ ಬಿ.ಚಿತ್ರ,ಅಡ್ಡೆಂಗಡ ಆರ್. ಗೀತ, ಟಿ.ಕೆ. ಚಂದ್ರ. ಕೆ.ಆರ್. ಗಜಾನನ, ಹೆಚ್.ಹೆಚ್. ಗಣೇಶ್, ಲಲಿತ, ಹೆಚ್.ಎಂ. ಬಸವರಾಜು, ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕರು ಸೇರಿದಂತೆ ಇನ್ನಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅರಮಣಮಾಡ ಬೋಸ್ ಮಂದಣ್ಣ, ಆದೇಂಗಡ ನಳ, ಪುಚ್ಚಿಮಾಡ ಸುಭಾಶ್, ಕಾಟಿಮಾಡ ಶರೀನ್ ಮುತ್ತಣ್ಣ, ಮಲ್ಚೀರ ನಾಣಯ್ಯ, ಡಾ.ಸುಬ್ರಮಣಿ, ಶಿವನಂಜಪ್ಪ, ಪೋಡಮಾಡ ಸುಕೇಶ್ ಮುಂತಾದವರು ಸಂಘದ ಅಭಿವೃದ್ದಿ ಹಾಗೂ ಮುಂದಿನ ಕಾರ್ಯಚಟುವಟಿಕೆ ಬಗ್ಗೆ ಸಲಹೆ ನೀಡಿದರು. ಚೆಕ್ಕೆರ ಸೂರ್ಯ ಅಯ್ಯಪ್ಪ, ಕಾಡ್ಯಮಾಡ ಉದಯ, ಅರಮಣಮಾಡ ಸುಗುಣ ಗಣಪತಿ, ಸುರೇಶ್ ಸುಬ್ಬಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಮಾಚಂಗಡ ಆರ್. ಗಾಯತ್ರಿ, ವಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರು ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.