ಮಡಿಕೇರಿ, ಸೆ. ೧೧: ಐತಿಹಾಸಿಕ ಹಿನ್ನೆಲೆಯಿರುವ ಮಡಿಕೇರಿ ದಸರಾ ನಾಡ ಹಬ್ಬಕ್ಕೆ ಸರಕಾರದಿಂದ ೧.೫೦ ಕೋಟಿ ಅನುದಾನ ಲಭಿಸಿದೆ.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನೇತೃತ್ವದಲ್ಲಿ ಮಡಿಕೇರಿ ದಸರಾ ಸಮಿತಿ ಪದಾಧಿಕಾರಿಗಳು ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮನವಿ ಸಲ್ಲಿಸಿದ ಮೇರೆಗೆ ಮುಖ್ಯಮಂತ್ರಿಗಳು ೧.೫೦ ಕೋಟಿ ಅನುದಾನ ನೀಡುವದಾಗಿ ಘೋಷಿಸಿದ್ದಾರೆ.
ಕಳೆದ ವರ್ಷ ಕೂಡ ೧.೫೦ ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ಹೆಚ್ವಿಗೆ ಅನುದಾನ ನಿರೀಕ್ಷಿಸಲಾಗಿತ್ತಾದರೂ ಅಂತಿಮವಾಗಿ ಜಿಲ್ಲಾಡಳಿತದಿಂದ ಸಲ್ಲಿಕೆಯಾದ ಮನವಿಯಂತೆ ಮುಖ್ಯಮಂತ್ರಿಗಳು ಕಳೆದ ವರ್ಷದ ಅನುದಾನಕ್ಕೆ ನಿಯೋಗ ತೆರಳುವ ಮುನ್ನವೇ ಸಹಿ ಮಾಡಿ ಅಂತಿಮಗೊಳಿಸಿದ್ದಾರೆ.
ಕಳೆದ ಬಾರಿಯಂತೆ ಈ ಬಾರಿಯೂ ೧.೫ ಕೋಟಿ ಅನುದಾನ ಒದಗಿಸಲಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.
ನಿಯೋಗದಲ್ಲಿ ದಸರಾ ಸಮಿತಿ ಅಧ್ಯಕ್ಷೆ ಕಲಾವತಿ, ಕಾರ್ಯಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ, ಉಪಾಧ್ಯಕ್ಷ ಡಿಶು, ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ, ಸಹ ಕಾರ್ಯದರ್ಶಿ ಮುದ್ದುರಾಜ್, ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್ ಅಣ್ವೇಕರ್, ವೇದಿಕೆ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಕಾವೇರಿಯಪ್ಪ ಇತರರು ಇದ್ದರು.