ಪಾಲಿಬೆಟ್ಟ, ಸೆ. ೧೨: ಇಲ್ಲಿನ ಕಾವೇರಿ ಸಂಘದ ವತಿಯಿಂದ ಕೈಲ್‌ಮುಹೂರ್ತ ಹಬ್ಬದ ಅಂಗವಾಗಿ ೪೫ನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಚೆನ್ನಂಗಿ ಕಾವೇರಿ ಕ್ಲಬ್ ಆವರಣದಲ್ಲಿ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಹಲವು ಸ್ಪರ್ಧಿಗಳು ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಾಟೇರಿರ ಕರುಣ್ ಪ್ರಥಮ, ಅಲ್ಲಪ್ಪಂಡ ಶರಣು ದ್ವಿತೀಯ, ಕುಟ್ಟಂಡ ಮದನ್ ತೃತೀಯ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೋಂಡ ವಿಜು ಸುಬ್ರಮಣಿ ಮಾತನಾಡಿ ಹಬ್ಬ ಆಚರಣೆಗಳ ಮೂಲಕ ಸಮಾಜ ಬಾಂಧವರು ಒಗ್ಗೂಡುವಿಕೆಯೊಂದಿಗೆ ಸಂಪ್ರದಾಯ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಸಾಧನೆ ತೋರುತ್ತಿದ್ದಾರೆ. ಕಾವೇರಿ ಸಂಘ ಹಲವು ವರ್ಷಗಳಿಂದಲೂ ವಿವಿಧ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿ ಮುನ್ನಡೆಯುತ್ತಿದೆ ಎಂದರು.

ಕಾವೇರಿ ಸಂಘದ ಸ್ಥಾಪಕ ಅಧ್ಯಕ್ಷ ಡಾ. ಎ.ಸಿ. ಗಣಪತಿ ಮಾತನಾಡಿ, ಕಳೆದ ೪೫ ವರ್ಷಗಳಿಂದ ಕಾವೇರಿ ಸಂಘ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದೆ.

ಸ್ಪರ್ಧೆಯಲ್ಲಿ ೫೦ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಕಾವೇರಿ ಸಂಘದ ಅಧ್ಯಕ್ಷ ತೆಕ್ಕಡೆ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕಾಡ್ಯಮಾಡ ಮಿಲನ್ ಸುಬ್ಬಯ್ಯ, ಸಂಘದ ಕಾರ್ಯದರ್ಶಿ ಮಲ್ಲಂಗಡ ಕಿಶೋರ್, ವಕೀಲ ಕೆ.ಜಿ. ಉತ್ತಪ್ಪ, ಗಗನ್ ಕಾರ್ಯಪ್ಪ, ಪಶು ವೈದ್ಯಾಧಿಕಾರಿ ನವೀನ್ , ಮತ್ತಿತರರು ಉಪಸ್ಥಿತರಿದ್ದರು.