ವೀರಾಜಪೇಟೆ, ಸೆ. ೧೨: ಮಕ್ಕಳು ಸಮಾಜದ ಭವಿಷ್ಯದ ಆಸ್ತಿಯಾಗಿದ್ದು, ಅವರನ್ನು ಸಮರ್ಥ ಮತ್ತು ಸ್ವಚ್ಛ ಸಮಾಜ ನಿರ್ಮಾಣದಲ್ಲಿ ಜೋಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಮಂಡೆಪAಡ ಸುಜಾ ಕುಶಾಲಪ್ಪ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಂಡೆಪAಡ ಸುಜಾ ಕುಶಾಲಪ್ಪ ಅವರು ಕರ್ನಾಟಕ ರಾಜ್ಯ ಮಕ್ಕಳ ಅವರು, ಮುಂದಿನ ದಿನಗಳಲ್ಲಿ ಸಂಘಟನೆ ನಡೆಸುವ ಸೃಜನಾತ್ಮಕ ಮಕ್ಕಳ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಲ್ಲದೆ, ಸರಕಾರದಿಂದ ಅನುದಾನ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆಯಿತ್ತರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಅತ್ಯಂತ ಪ್ರಾಮಾಣಿಕ ಮತ್ತು ನೈಜತೆಗೆ ಹತ್ತಿರವಾಗಿ ಮಕ್ಕಳ ಸೇವೆಯನ್ನು ಮಾಡುತ್ತಿರುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅತ್ಯಂತ ಉನ್ನತ ಸ್ಥಾನಕ್ಕೆ ಬೆಳೆಯಬೇಕು ಮತ್ತು ಸರಕಾರ ಇಂತಹ ಸಂಘಟನೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಬೇಕೆಂದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಮಾತನಾಡಿ, ಸಂಘಟನೆ ಬೆಳೆದು ಬಂದ ಹಾದಿ ಮತ್ತು ಕೊಡಗಿನಲ್ಲಿ ಈ ಸಂಘಟನೆ ಅಸ್ತಿತ್ವದ ಅವಶ್ಯಕತೆ ಬಗ್ಗೆ ವಿವರಿಸಿದರು. ಪ್ರಗತಿ ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮಾ ಸಂಘಟನೆಗೆ ಶುಭ ಹಾರೈಸಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ಕೊಡಗಿನಲ್ಲಿ ಸಾಹಿತ್ಯ ಲೋಕ ನಡೆದು ಬಂದ ಹಾದಿ ಮತ್ತು ಕೊಡಗು ಜಿಲ್ಲೆಗೆ ಮಕ್ಕಳ ಸಾಹಿತ್ಯ ಪರಿಷತ್‌ನ ಅನಿವಾರ್ಯತೆಯ ಬಗ್ಗೆ ವಿವರಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎನ್. ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿ ವತಿಯಿಂದ ಜಿಲ್ಲಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರಿಗೆ, ಅಧಿಕೃತ ಆದೇಶ ಪತ್ರದೊಂದಿಗೆ ಸನ್ಮಾನಿಸಿ, ಅಧಿಕಾರ ನೀಡಲಾಯಿತು. ನಂತರ ಜಿಲ್ಲಾ ಸಮಿತಿ ಮತ್ತು ೫ ತಾಲೂಕು ಸಮಿತಿಗಳ ಪದಗ್ರಹಣ ನಡೆಯಿತು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಸಚಿನ್, ಕೊಡಗು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ, ಕರಿನೆರವಂಡ ಡ್ಯಾನಿ ಕುಶಾಲಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷೆ ಮುಕ್ಕಾಟಿರ ಕಾವೇರಮ್ಮ, ಮಡಿಕೇರಿ ತಾಲೂಕು ಅಧ್ಯಕ್ಷ ಪಾಲೆರ ಮಂದಣ್ಣ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ವಿನೋದ್ ಮೂಡಗದ್ದೆ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಅಪುö್ಪಡ ಸುದೀಶ್ ಕುಶಾಲಪ್ಪ, ಕುಶಾಲನಗರ ತಾಲೂಕು ಅಧ್ಯಕ್ಷೆ ಚೈತನ್ಯ ಸಿ ಮೋಹನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ನಂತರ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ನೆರವೇರಿತು. ಕುಶಾಲನಗರದ ತಿಷ್ಯ ಪೊನ್ನೆಟ್ಟಿ ಪ್ರಾರ್ಥಿಸಿ, ಮಡಿಕೇರಿ ತಾಲೂಕಿನ ಪ್ರಧಾನ ಕಾರ್ಯದರ್ಶಿ ಹರ್ಷಿತ ಶೆಟ್ಟಿ ಮನವಳಿಕೆ ಗುತ್ತು ಸ್ವಾಗತಿಸಿದರೆ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ವಿನೋದ್ ಮೂಡಗದ್ದೆ ವಂದಿಸಿ, ವೀರಾಜಪೇಟೆಯ ಕಣಿಯರ ಕೌಶಲ್ಯ ಹರೀಶ್ ನಿರೂಪಿಸಿದರು.