ವೀರಾಜಪೇಟೆ, ಸೆ. ೧೯ : ಕರ್ನಾಟಕ ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಮೀಸಲು ಮತ್ತು ಬ್ರಹ್ಮಗಿರಿ ಅರಣ್ಯ ಪ್ರದೇಶದ ಕೆರಟಿ ಮತ್ತು ಉರುಟಿ ಅರಣ್ಯದಲ್ಲಿ ಕೆಲವು ಕಡೆ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ವಸ್ತುಗಳು ತುಂಬಿಕೊAಡು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ.
ಅರಣ್ಯ ಪ್ರದೇಶದಲ್ಲಿ ಟೈಲ್ಸ್ ತುಂಡುಗಳು, ಪ್ಲಾಸ್ಟಿಕ್, ಮದ್ಯದ ಖಾಲಿ ಬಾಟಲಿ, ಪ್ಲಾಸ್ಟಿಕ್ ಬಾಟಲಿಗಳನ್ನು ಕೆಲವರು ಎಸೆದು ಹೋಗಿದ್ದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇಲ್ಲಿನ ವನ್ಯ ಪ್ರಾಣಿಗಳಿಗೆ ಇದೀಗ ತ್ಯಾಜ್ಯವೇ ಆಹಾರವಾಗಿದೆ. ಮರದ ಕೊಂಬೆಗಳಲ್ಲಿ ಕುಳಿತು ಮಂಗಗಳು ಪ್ಲಾಸ್ಟಿಕ್ ಚೀಲಗಳಲ್ಲಿರುವ ವಸ್ತುಗಳನ್ನು ತಡಕುತ್ತಾ ಪ್ಲಾಸ್ಟಿಕ್ ಬ್ಯಾಗ್ ಅನ್ನ ಸೇವಿಸಲು ಹೊರಟಿರುವ ದೃಶ್ಯ ಕಂಡು ಬರುತ್ತಿದೆ.
ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ನಿಷೇಧದ ಸೂಚನೆ ಫಲಕಗಳು ಇದ್ದರೂ ಕೂಡ ಕೇರಳದಿಂದ ಬರುವ ಪ್ರವಾಸಿಗರು ಸೇರಿದಂತೆ ಇತರರು ತ್ಯಾಜ್ಯಗಳನ್ನು ತಂದು ಇಲ್ಲಿ ರಾಜರೋಷವಾಗಿ ಸುರಿಯುತ್ತಿದ್ದಾರೆ.
ಮಾಕುಟ್ಟದಲ್ಲಿ ಇರುವ ತಪಾಸಣಾ ಗೇಟಿನಲ್ಲಿ ಯಾವುದೇ ರೀತಿಯ ತಪಾಸಣೆ ನಡೆಸದೆ ಕರ್ನಾಟಕಕ್ಕೆ ಪ್ರವೇಶ ನೀಡುತ್ತಿರುವುದರಿಂದ ಕೇರಳದ ತ್ಯಾಜ್ಯಗಳಿಗೆ ಈ ಅರಣ್ಯ ಪ್ರದೇಶ ಕೇಂದ್ರವಾಗಿದೆ. ಕೊಡಗು ಜಿಲ್ಲಾಡಳಿತ ಈ ಬಗ್ಗೆ ಹೆಚ್ಚಿನ ಗಮನಹರಿಸಿ ಕೇರಳದಿಂದ ಬರುವ ತ್ಯಾಜ್ಯಗಳನ್ನು ತಡೆಗಟ್ಟುವಲ್ಲಿ ಹೆಚ್ಚಿನ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಜಿಲ್ಲಾಡಳಿತ ಮುತುವರ್ಜಿ ವಹಿಸದಿದ್ದರೆ ಅರಣ್ಯ ಸಂಪತ್ತು ನಾಶ ದೊಂದಿಗೆ, ಇಲ್ಲಿರುವ ವನ್ಯಜೀವಿಗಳು ವಿನಾಶದತ್ತ ಸಾಗಿ ಸಂಪೂರ್ಣ ಪರಿಸರ ಕಲುಷಿತಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.