ವೀರಾಜಪೇಟೆ, ಸೆ. ೧೯: ರಾಜ್ಯ ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆ ವೀರಾಜಪೇಟೆ ತಾಲೂಕು ಅಧ್ಯಕ್ಷ ಪಿ.ವಿ. ಜಾನ್ಸನ್ ಅಧ್ಯಕ್ಷತೆಯಲ್ಲಿ ಶಾಸಕರ ಭವನದಲ್ಲಿ ನಡೆಯಿತು.
ಅಧ್ಯಕ್ಷ ಜಾನ್ಸನ್ ಮಾತನಾಡಿ, ವೀರಾಜಪೇಟೆಯ ಕೆಲವು ನ್ಯಾಯಬೆಲೆ ಅಂಗಡಿಯಲ್ಲಿ ಸರಕಾರದ ವತಿಯಿಂದ ಉಚಿತವಾಗಿ ನೀಡುವ ಅಕ್ಕಿಗೆ ಹಣ ಪಡೆಯುತ್ತಿರುವ ದೂರುಗಳಿದ್ದು, ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಾಕೋಟುಪರಂಬುವಿನ ನ್ಯಾಯಬೆಲೆ ಅಂಗಡಿಯಲ್ಲಿ ಒಂದು ಕೆ.ಜಿ. ಅಕ್ಕಿಗೆ ಎರಡು ರೂಪಾಯಿ ಹೆಚ್ಚಿಗೆ ಪಡೆಯುತ್ತಿರುವ ಅಂಗಡಿ ಮೇಲೆ ಕ್ರಮವನ್ನು ಕೈಗೊಳ್ಳಬೇಕು. ಇದೇ ರೀತಿ ಬಡವರಿಂದ ಉಚಿತವಾಗಿ ನೀಡುವ ಅಕ್ಕಿಗೆ ಹಣ ಪಡೆಯುವುದು ಮುಂದುವರಿದರೆ ಅಂತಹ ನ್ಯಾಯಬೆಲೆ ಅಂಗಡಿಯನ್ನು ಮುಚ್ಚಿಸಿ ಉತ್ತಮ ರೀತಿಯಲ್ಲಿ ನಡೆಸಲು ಬೇರೆಯವರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅಧ್ಯಕ್ಷ ಜಾನ್ಸನ್ ಮಾಹಿತಿ ನೀಡಿದರು.
ಸರಕಾರವು ಉಚಿತವಾಗಿ ಮಹಿಳೆಯರಿಗೆ ಸಂಚರಿಸಲು ಬಸ್ ವ್ಯವಸ್ಥೆ ಮಾಡಿದೆ. ಆದರೆ, ವೀರಾಜಪೇಟೆಯಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿ ಇದೆ. ಆದರೆ ಬಸ್ ನಿಲ್ದಾಣಕ್ಕೆ ಬರುತ್ತಿಲ್ಲ. ಅಲ್ಲದೆ ಕೊರೊನಾ ಸಂದರ್ಭದಲ್ಲಿ ನಿಂತು ಹೋಗಿದ್ದ ಸುಮಾರು ಆರು ಬಸ್‌ಗಳ ಜೊತೆಯಲ್ಲಿ ಮತ್ತೆ ಮೂರು ಬಸ್ ಸಂಚಾರದ ವ್ಯವಸ್ಥೆಯನ್ನು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಅನುಕೂಲ ಮಾಡಿಕೊಟ್ಟಿದ್ದರು. ಅದರಲ್ಲಿ ಮೂರು ಬಸ್ ಸಂಚಾರ ಸ್ಥಗಿತಗೊಂಡಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಬಗ್ಗೆ ಮಾಹಿತಿ ಕೇಳಿದಾಗ ದಸರಾ ಹಬ್ಬದ ಹಿನ್ನೆಲೆಯಲ್ಲಿ ಕೆಲವು ಬಸ್‌ಗಳು ಬೇರೆ ಮಾರ್ಗದಲ್ಲಿ ಸಂಚರಿಸುತ್ತಿವೆ ಎಂದು ತಿಳಿಸಿದರು.
ವೀರಾಜಪೇಟೆ ಸರಕಾರಿ ಬಸ್ ನಿಲ್ದಾಣದಿಂದ ಹೊರಡುತ್ತಿದ್ದ ರಾತ್ರಿ ಎಂಟು ಗಂಟೆಯ ಬಸ್ ಮತ್ತು ೧೦.೩೦ ರ ಬಸ್‌ಗಳನ್ನು ಮರಳಿ ಸಂಚರಿಸಲು ಅವಕಾಶ ಮಾಡಿಕೊಡುವಂತೆ ತಿಳಿಸಿದರು