ವೀರಾಜಪೇಟೆ, ಸೆ. ೧೯: ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ಗಣಪತಿ ಸೇವಾ ಸಮಿತಿಯು ವಿಭಿನ್ನ, ವೈವಿಧ್ಯಮಯ ಕಲಾ ತಂಡಗಳೊAದಿಗೆ ಶೋಭಾಯಾತ್ರೆಯಲ್ಲಿ ಭಾಗವಹಿಸುವುದರ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ ಹಿನ್ನಲೆಯಲ್ಲಿ ಸಂಸ್ಕೃತಿಯನ್ನು ಬಿಂಬಿಸಿದ ಅತ್ಯುತ್ತಮ ಸಮಿತಿ ಎಂಬ ಬಹುಮಾನ ಗಳಿಸಿತು.
ವೀರಾಜಪೇಟೆಯ ಸಕ್ಸಸ್ ಮೆನ್ಸ್ ಹಬ್ ವತಿಯಿಂದ ವೀರಾಜಪೇಟೆಯ ಗೌರಿ ಗಣೇಶೋತ್ಸವ ಸಮಿತಿಗಳಿಗೆ ನೀಡಲಾದ ಸನ್ಮಾನ ಸಮಾರಂಭದಲ್ಲಿ ಸಮಿತಿಯವರಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು.
ಸಮಿತಿಯ ವಿದ್ಯುತ್ ಅಲಂಕೃತ ಮಂಟಪದ ಮುಂಭಾಗದಲ್ಲಿನ ವಾಹನದಲ್ಲಿ ಶಿವನ ಮಹಿಮೆ ಸಾರುವ ಶಿವನ ಚಲನವಲನದಿಂದ ಕೂಡಿದ ಆಕೃತಿ, ಶಿವ, ಅಘೋರಿಗಳು, ಹನುಮಂತ, ಶಿವನ ಅವತಾರದ ವೇಷಧಾರಿ, ಹುಲಿ, ಕೋತಿಗಳ ವೇಷಧಾರಿಗಳು, ಮೆರವಣಿಗೆಯಲ್ಲಿ ಪಾಲ್ಗೊಂಡ ಆನೆಯ ಕಲಾಕೃತಿ, ಮಂಗಳೂರಿನ ನಾಸಿಕ್ ಬ್ಯಾಂಡ್ ತಂಡದ ಪ್ರದರ್ಶನ ಸಾರ್ವಜನಿಕರ ಗಮನಸೆಳೆದ ಹಿನ್ನಲೆಯಲ್ಲಿ ಬಹುಮಾನಕ್ಕೆ ಅರ್ಹವಾಯಿತು.
ಪಂಜರಪೇಟೆಯ ಗಣಪತಿ ಬೀದಿಯ ಮಹಾಗಣಪತಿ ಸೇವಾ ಗಣೇಶೋತ್ಸವ ಸಮಿತಿ ಸ್ತಬ್ಧಚಿತ್ರವು ಸಮಾಜಕ್ಕೆ ಮಾದರಿ ಸಂದೇಶ ನೀಡಿದ ಸಮಿತಿ ಎನ್ನುವ ಬಹುಮಾನಕ್ಕೆ ಭಾಜನವಾಯಿತು. ಈ ಹಿನ್ನಲೆಯಲ್ಲಿ ಸಮಿತಿ ಸದಸ್ಯರಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು. ದೈತ್ಯಕೃತಿಯ ಸ್ತಬ್ಧಚಿತ್ರವು ಧೂಮಪಾನ ವಿರುದ್ಧ ಜಾಗೃತಿ ಮೂಡಿಸುವ ಸಂದೇಶವನ್ನು ಸಾರಿದ ಹಿನ್ನಲೆಯಲ್ಲಿ ಬಹುಮಾನಕ್ಕೆ ಅರ್ಹವಾಯಿತು.