ಗೋಣಿಕೊಪ್ಪಲು, ಸೆ. ೧೯: ಪ್ರವಾದಿ ಮಹಮ್ಮದ್ ಪೈಗಂಬರ್ರವರ ೧೫೦೦ನೇ ಜನ್ಮ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಕಣ್ಣಿನ ತಪಾಸಣಾ ಶಿಬಿರವು ಮಾಯಮುಡಿ ಸಮೀಪದ ಬೆಮ್ಮತ್ತಿ ಗ್ರಾಮದ ಅಯಾತುಲ್ ಇಸ್ಲಾಂ ಮದ್ರಸ ಹಾಗೂ ಜಮಾಅತ್ ಸಮಿತಿಯ ವತಿಯಿಂದ ಜರುಗಿತು.
ಸುತ್ತಮುತ್ತಲಿನ ನಾಗರಿಕರು, ಯುವಕರು, ಮಹಿಳೆಯರು ಶಿಬಿರಕ್ಕೆ ಆಗಮಿಸಿ ರಕ್ತದಾನ ಮಾಡಿದರು. ಅಲ್ಲದೆ ಕಣ್ಣಿನ ತಪಾಸಣೆಯ ಪ್ರಯೋಜನ ಪಡೆದರು. ನುರಿತ ತಜ್ಞ ವೈದ್ಯರು, ಸೇರಿದಂತೆ ಇನ್ನಿತರ ವೈದ್ಯಕೀಯ ತಂಡ ಭಾಗವಹಿಸಿದ್ದರು. ರಕ್ತದಾನ ಮಾಡಿದವರಿಗೆ ಸಮಿತಿಯ ವತಿಯಿಂದ ದೃಢೀಕರಣವನ್ನು ವಿತರಿಸಲಾಯಿತು.
ಸಮಿತಿಯ ಕಾರ್ಯದರ್ಶಿ ಕೆ.ಎಸ್. ಹಂಸ ಮಾತನಾಡಿ, ವರ್ಷಂಪ್ರತಿ ಸಮಿತಿಯ ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಉತ್ತಮ ರೀತಿಯ ಸ್ಪಂಧನೆ ದೊರೆಯುತ್ತಿದೆ. ಈ ಬಾರಿಯೂ ನಿರೀಕ್ಷೆಗೂ ಮೀರಿ ರಕ್ತದಾನ ಶಿಬಿರಕ್ಕೆ ನಾಗರಿಕರು ಆಗಮಿಸಿ ರಕ್ತದಾನ ಮಾಡಿದ್ದಾರೆ. ಮುಂದೆಯೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಮಸೀದಿಯ ಅಧ್ಯಕ್ಷ ಬಾಪುಟ್ಟಿ, ಕಾರ್ಯದರ್ಶಿ ಕೆ.ಎಸ್.ಹಂಸ, ಖಜಾಂಚಿ ಸೈಯದ್ ಅಲಿ, ಕಾರ್ಯಕ್ರಮದ ಸಂಚಾಲಕ ಪಿ.ಇ. ಮೈಮುಟ್ಟಿ, ಈದ್ ಮಿಲಾದ್ ಸಮಿತಿಯ ಅಧ್ಯಕ್ಷ ಸಿ.ಎಸ್.ಅನೀಶ್, ಉಪಾಧ್ಯಕ್ಷ ಉಮ್ಮರ್, ಜಮಾಅತ್ನ ಕಾರ್ಯದರ್ಶಿ ಕೆ.ಎಸ್. ಹಂಸ, ಉಪಕಾರ್ಯದರ್ಶಿ ಎನ್.ಎಸ್. ಆಸಿಫ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.