ಸೋಮವಾರಪೇಟೆ, ಸೆ. ೨೦: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದ ಶ್ರೀ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ತಾ. ೨೨ರಿಂದ (ನಾಳೆಯಿಂದ) ಅ. ೨ರವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ನಂದಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೨ರಂದು ಬೆಳಿಗ್ಗೆ ಶ್ರೀ ದೇವಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದು ಪ್ರತಿಷ್ಠಾಪನೆ ಮಾಡಲಾಗುವುದು. ಸಂಜೆ ದೇವಿಗೆ ಹರಿದ್ರಾಲಂಕಾರ ಮಾಡಿ, ಲಲಿತ ಸಹಸ್ರನಾಮ, ಕುಂಕುಮಾರ್ಚನೆ, ರಂಗಪೂಜೆ ಹಾಗೂ ಮಹಾಮಂಗಳಾರತಿ ಮಾಡಲಾಗುವುದು.

ತಾ.೨೩ ರಂದು ದೇವಿಗೆ ಕವಡೆ ಅಲಂಕಾರ, ೨೪ ರಂದು ಹೂವಿನ ಅಲಂಕಾರ, ೨೫ ರಂದು ಗೆಜ್ಜೆ ಅಲಂಕಾರ, ೨೬ ರಂದು ವೀಳ್ಯದಲೆ ಅಲಂಕಾರ, ೨೭ ರಂದು ಮುತ್ತಿನ ಅಲಂಕಾರ, ೨೮ ರಂದು ಏಲಕ್ಕಿ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡಲಾಗುವುದು ಎಂದರು.

ತಾ. ೨೯ ರಂದು ಬೆಳಿಗ್ಗೆ ೮.೩೦ಕ್ಕೆ ಸರಸ್ವತಿ ಪೂಜೆ, ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುವುದು. ಸಂಜೆ ದೇವಿಗೆ ಶಾರದಾಂಬೆ ಅಲಂಕಾರ ಮಾಡಲಾಗುವುದು. ೨೯ ರಂದು ಬೆಳಿಗ್ಗೆ ೭ ಗಂಟೆಗೆ ದುರ್ಗಾಹೋಮ ನಡೆಯಲಿದೆ. ಸಂಜೆ ದೇವಿಗೆ ದುರ್ಗಾ ಅಲಂಕಾರ ಮಾಡಲಾಗುವುದು. ಅ.೧ ರಂದು ದೇವಿಗೆ ಧನಲಕ್ಷಿö್ಮÃ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಅ.೨ ರಂದು ದೇವಿಯ ವಿಸರ್ಜನಾ ಕಾರ್ಯಕ್ರಮ ನಡೆಸಲಾಗುವುದು. ಅಂದು ಬೆಳಿಗ್ಗೆ ೧೦.೪೫ರಿಂದ ದೇವಿಯ ಸಡಿಲಿಕೆ ನಂತರ ಸೌಲಕ್ಕಿ ಕಾರ್ಯಕ್ರಮ ನಡೆಯುವುದು. ಮಧ್ಯಾಹ್ನ ೨ಕ್ಕೆ ಡೊಳ್ಳುಕುಣಿತ, ನಾಸಿಕ್ ಬ್ಯಾಂಡ್, ಭಜನಾ ನೃತ್ಯ, ಪೂಜಾ ಕುಣಿತ ಹಾಗೂ ವೀರಗಾಸೆಯೊಂದಿಗೆ, ದೇವಿಯ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯೊಂದಿಗೆ ಆನೆಕೆರೆ ಬಳಿಯಲ್ಲಿ ಬನ್ನಿಯನ್ನು ಸ್ನೇಹಧ್ಯೋತಕವಾಗಿ ವಿತರಿಸಿದ ನಂತರ ಆನೆಕೆರೆಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ೭೭೬೦೯೧೯೭೦೫ ಸಂಪರ್ಕಿಸಲು ಮನವಿ ಮಾಡಿದರು.

ಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಸೋಮೇಶ್, ರಾಮ್‌ಪ್ರಸಾದ್, ಮಧುಸೂದನ್ ಹಾಗೂ ಶ್ರೀಕಾಂತ್ ಇದ್ದರು.